ದೆಹಲಿ: ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್‌ಗಳ ಆತಂಕದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆದಷ್ಟು ಬೇಗ ರಾಷ್ಟ್ರೀಯ ತನಿಖಾ ದಳ ಕಚೇರಿ ಸ್ಥಾಪಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಕ್ಷಿಣ ಕನ್ನಡದ ಯುವ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾರನ್ನು ಭೇಟಿಯಾದ ಬ್ರಿಜೇಶ್ ಚೌಟ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿವೆ. ಹೀಗಾಗಿ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಅಗತ್ಯತೆ ಇದೆ ಎಂದು ಮನವಿ ಮಾಡಿದ್ರು. ಎನ್‌ಐಎ ಇತ್ತೀಚೆಗೆ ಮಂಗಳೂರಿನಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸಿರುವುದು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದೆ. ಜಿಹಾದಿ ಉಗ್ರವಾದ, ಸಂಘಟಿತ ಅಪರಾಧ ಮತ್ತು ಅಂತರರಾಷ್ಟ್ರೀಯ ಕಳ್ಳಸಾಗಣೆ ಸೇರಿದಂತೆ ಪುನರಾವರ್ತಿತ ಬೆದರಿಕೆಗಳನ್ನು ಪರಿಗಣಿಸಿ, ಮಂಗಳೂರಿನಲ್ಲಿ ಸಮಗ್ರ ಗುಪ್ತಚರ ಸಮನ್ವಯ ಮತ್ತು ಕಾರ್ಯಾಚರಣೆಯ ಸಾಮರ್ಥ್ಯದೊಂದಿಗೆ ಶಾಶ್ವತವಾದ ಸಂಪೂರ್ಣ ಸುಸಜ್ಜಿತ ಎನ್‌ಐಎ ಕಚೇರಿಯನ್ನು ಸ್ಥಾಪಿಸುವಂತೆ ಅಮಿತ್ ಶಾ ಅವರಿಗೆ ಬ್ರಿಜೇಶ್ ಚೌಟಾ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪನೆ ಆದಲ್ಲಿ ಇಡೀ ದಕ್ಷಿಣ ಭಾರತಕ್ಕೆ ಒಂದು ದೃಢ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂಬುದನ್ನು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮೂರು ತಿಂಗಳ ಹಿಂದೆ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಎನ್‌ಐಎ ತನಿಖೆಗೆ ವಹಿಸಿದೆ. ಪ್ರಕರಣದ ಗಂಭೀರತೆ ಅರಿತು ಸುಹಾಸ್ ಹತ್ಯೆಯನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸುವಲ್ಲಿ ಕೇಂದ್ರ ಗೃಹ ಸಚಿವರು ಮುತುವರ್ಜಿ ವಹಿಸಿ ತ್ವರಿತ ಕ್ರಮ ಕೈಗೊಂಡಿರುವುದಕ್ಕೆ ಸಂಸದ ಬ್ರಿಜೇಶ್ ಚೌಟ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಕರ್ನಾಟಕದ ಭರವಸೆಯ ಬಿಜೆಪಿ ನಾಯಕರಲ್ಲಿ ಒಬ್ಬರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಪಾದರಸದಂತಹ ಚಟುವಟಿಕೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.