ಗದಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಕರಾಳ ದಿನ ಆರಂಭವಾಗಿದೆ ಎಂದು ರಾಜ್ಯ ಬಿಜೆಪಿ ರೈತ ಸಂಘದ ಅಧ್ಯಕ್ಷ ಎ.ಎಸ್ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ನಿಲ್ಲಿಸಿದ್ದಾರೆ. ರೈತರ ಜಮೀನಿಗೆ ನೀಡುತ್ತಿದ್ದ ವಿದ್ಯುತ್ ಸಹ ಸ್ಥಗಿತಗೊಳಿಸಿದ್ದಾರೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದ ವಿದ್ಯಾನಿಧಿಯನ್ನು ನಿಲ್ಲಿಸಿದ್ದಾರೆ. ಸಿರಿಧಾನ್ಯಗಳ ಬೆಳೆಗಳಿಗೆ ಪ್ರತಿ ಹೆಕ್ಟರ್ ಗೆ 10 ಸಾವಿರ ರೂ. ನೀಡುವ ಯೋಜನೆಯನ್ನು ನಿಲ್ಲಿದ್ದಾರೆ. ರಾಜ್ಯದ 23 ಲಕ್ಷ ರೈತರಿಗೆ ಹೈನುಗಾರಿಕೆಗಾಗಿ ನೀಡುತ್ತಿದ್ದ 5 ರೂ. ಪ್ರೋತ್ಸಾಹ ಧನ ನಿಲ್ಲಿಸುವ ಮೂಲಕ ರೈತ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ರು.
ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ಪೂರೈಕೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ರೈತ ಸಂಘದ ಅಧ್ಯಕ್ಷ ಎ.ಎಸ್ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ರೈತರಿಗೆ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಯೂರಿಯಾ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇರುವುದಿಲ್ಲ. ಈ ಸಮಯದಲ್ಲಿ ಯೂರಿಯಾವನ್ನು ಖರೀದಿಸಿ ಇಡಬೇಕಿತ್ತು. ಹವಾಮಾನದ ಮೂನ್ಸೂಚನೆ ರಾಜ್ಯ ಸರ್ಕಾರದ ಗಮನಕ್ಕೆ 2 ತಿಂಗಳ ಮೊದಲೇ ಇರುತ್ತದೆ. ರೈತರು ಬದಲಾವಣೆ ಮಾಡುವ ಬೆಳೆಗಳ ಬಗ್ಗೆ ಗಮನ ಹರಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ರೆ ಸರ್ಕಾರ ತನ್ನ ಕರ್ತವ್ಯ ಮರೆತಿದೆ.
ರಾಜ್ಯಕ್ಕೆ 6ಲಕ್ಷ 85 ಸಾವಿರ ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಕೇಂದ್ರದಿಂದ 8ಲಕ್ಷ ಟನ್ ಬಂದಿದೆ ಎಂದು ಕೃಷಿ ಸಚಿವ ಸಚಿವರು ಜುಲೈ 27, 2025 ರಂದು ಹೇಳಿಕೆ ನೀಡುತ್ತಾರೆ. 5 ಲಕ್ಷ 16 ಸಾವಿರ ಮೆಟ್ರಿಕ್ ಟನ್ ಕೇಂದ್ರದಿಂದ ಯೂರಿಯಾ ಬಂದಿದೆ. ಇನ್ನೂ 1 ಲಕ್ಷ ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಕೇಂದ್ರ ನೀಡಬೇಕು ಎಂದು ಸಿಎಂ ಹೇಳ್ತಾರೆ. ಇದರಿಂದ ಕೃಷಿ ಸಚಿವರು ಹಾಗೂ ಸಿಎಂ ಹೇಳಿಕೆಗಳ ನಡುವೆ ಭಾರಿ ವ್ಯತ್ಯಾಸವಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಗುಡುಗಿದ್ರು.
ಹಲವು ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಶೇ. 100% ಮಳೆ ಆಗಿರಲಿಲ್ಲ. ಆದ್ರೆ ಈ ವರ್ಷ ಶೇ. 100% ಮಳೆ ಆಗಿದೆ. ರೈತರು ಬೆಳೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ಇದರಿಂದ ಯೂರಿಯಾಗೆ ಹೆಚ್ಟು ಬೇಡಿಕೆ ಬಂದಿದ್ದು, ಕೇಂದ್ರದಿಂದ ಬಂದ ಗೊಬ್ಬರ ಹಂಚುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಕೇಂದ್ರದಿಂದ ರಾಜ್ಯಕ್ಕೆ 8 ಲಕ್ಷ 75 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬಂದಿದೆ. ಆದ್ರೆ ರಾಜ್ಯ ಸರ್ಕಾರ ಸೊಸೈಟಿ ಮೂಲಕ ಕೇವಲ 5 ಲಕ್ಷ 30 ಸಾವಿರ ಮೆಟ್ರಿಕ್ ಟನ್ ಮಾತ್ರ ಹಂಚಿಕೆ ಮಾಡಿದೆ. ರಾಜ್ಯ ಸರ್ಕಾರ ಗೊಬ್ಬರ ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ ಅಂತ ಹೇಳಿದ್ರು.


