ಬೆಂಗಳೂರು: ಗಾಳಿ ಆಂಜನೇಯಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ವಹಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗಾಳಿ ಆಂಜನೇಯ ಸ್ವಾಮಿ ದೇಗುಲ ಟ್ರಸ್ಟ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ದತ್ ಯಾದವ್ ಪೀಠ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಗಾಳಿ ಆಂಜನೇಯ ದೇವಾಲಯದಲ್ಲಿ ಹಣ ದುರುಪಯೋಗದ ಆರೋಪವಿದೆ. ಹೀಗಾಗಿ ಸರ್ಕಾರದ ಕ್ರಮವನ್ನು ತಪ್ಪು ಎನ್ನಲಾಗುವುದಿಲ್ಲ ಎಂದು ಹೇಳಿದೆ.
ಗಾಳಿ ಆಂಜನೇಯ ಸ್ವಾಮಿ ದೇಗಲದ ಆಡಳಿತವನ್ನು ಸರ್ಕಾರ ತನ್ನ ಅಧೀನಕ್ಕೆ ಪಡೆದಿದ್ದು, ಧಾರ್ಮಿಕ ದತ್ತಿ ಇಲಾಖೆ ಉಸ್ತುವಾರಿ ನೋಡಿಕೊಂಡು ಹೋಗಲಿದೆ ಎಂದು ಹೇಳಿತ್ತು. ಇದರಿಂದ ದೇವಾಲಯದ ಆಡಳಿತ ಮಂಡಳಿ ಬೇರೆ ದಾರಿ ಇಲ್ಲದೇ ಕೋರ್ಟ್ ಮೊರೆ ಹೋಗಿತ್ತು. ಆದ್ರೆ ಇದೀಗ ಕೋರ್ಟ್ ಸಹ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಹೇಳಿದ್ದು, ದೇವಸ್ಥಾನದ ಟ್ರಸ್ಟ್ಗೆ ಹಿನ್ನೆಡೆಯಾಗಿದೆ.
ಹಿಂದಿನ ವರ್ಷ ದೇವಸ್ಥಾನದ ಹುಂಡಿ ಎಣಿಕೆ ವೇಳೆ ಕಾಣಿಕೆ ಹಣವನ್ನು ಸದಸ್ಯರು ಕದ್ದಿದ್ದರು. ಹಣ ಎಗರಿಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಅಕ್ರಮದ ಹಿನ್ನೆಲೆ ಸರ್ಕಾರ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಪಡೆದಿದ್ದು, ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು.


