ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾಯಿಸಬೇಕೋ, ಬೇಡವೂ ಎಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾವು, ನೀವು ಈ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಸಿಎಂ ಬದಲಾವಣೆ ಮಾಡುವ ಅಧಿಕಾರ ಹೈಕಮಾಂಡ್ಗೆ ಬಿಟ್ಟಿದ್ದು, ಈ ಬಗ್ಗೆ ಅವರೇ ಏನು ಮಾತನಾಡಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಮಾತನಾಡಿಲ್ಲ. ನಾವು ಈ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಸುರ್ಜೇವಾಲ ಸಭೆಯ ಕುರಿತು ಪ್ರತಿಕ್ರಿಯಿಸಿದ ಅವರು ಸರ್ಕಾರದ ಯೋಜನೆ ರಾಜ್ಯದ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ನಮ್ಮ ಭರವಸೆ ಈಡೇರಿಸುವ ಜೊತೆಗೆ ಜನರಿಗೆ ಸರ್ಕಾರದ ಯೋಜನೆ ಲಾಭ ತಲುಪಿಸುವ ಕಾರ್ಯವನ್ನು ಮಾಡಿ ಎಂದಿದ್ದಾರೆ ಎಂದ್ರು.
ಕೆಪಿಸಿಸಿ ಅಧ್ಯಕ್ಷ ಪಟ್ಟ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾವುದೇ ಕುರ್ಚಿ ಯಾರಿಗೂ ಶಾಶ್ವತವಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದರು.
ಇನ್ನೂ ರಾಹುಲ್ ಗಾಂಧಿ ಭೇಟಿಯ ಕುರಿತು ಮಾತನಾಡಿದ ಅವರು, ಸಮಯ ಸಂದರ್ಭದಲ್ಲಿ ಭೇಟಿಯಾಗಲು ಅವಕಾಶ ಸಿಗುತ್ತದೆ. ರಾಹುಲ್ ಗಾಂಧಿ ಬಿಹಾರ ಪ್ರವಾಸದಲ್ಲಿರುವ ಕಾರಣ ಸಿಎಂ, ಡಿಸಿಎಂಗೆ ಭೇಟಿಯಾಗಲು ಅವಕಾಶ ಸಿಕ್ಕಿಲ್ಲ. ಈ ಕಾರಣದಿಂದ ರಾಜ್ಯ ನಾಯಕರು ವೀಕ್ ಇದ್ದಾರೆ ಎಂದು ಹೇಳಲು ಆಗುವುದಿಲ್ಲ ಎಂದ್ರು.


