ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಮತ್ತು ಜನರನ್ನು ಮರೆತಿದ್ದಾರೆ. ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಗಮನಹರಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ರು.
ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿಎಂ ಕುರ್ಚಿಗಾಗಿ ಹೋರಾಟದಲ್ಲಿ ಮುಳುಗಿರುವ ಇಬ್ಬರು ನಾಯಕರು ತಮ್ಮ ಸ್ಥಾನಮಾನಗಳನ್ನು ರಕ್ಷಿಸಿಕೊಳ್ಳಲು ಎಲ್ಲಾ ಸಮಯವನ್ನು ಕಳೆಯುತ್ತಿದ್ದಾರೆ. ಇಂತಹ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಗುಡುಗಿದ್ರು.
ಸರ್ಕಾರದ ದುರಾಡಳಿತದಿಂದ ಯಾವ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿಲ್ಲ.ಜನರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿಯು ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಪಾಲಿಕೆ ಸಿಬ್ಬಂದಿಗಳು ಸಹ ಈಗ ಬೀದಿಗೆ ಇಳಿದಿದ್ದಾರೆ. ನಗರ ಸಭೆ, ಪುರಸಭೆಗಳಿಗೆ ಸಮರ್ಪಕ ಅನುದಾನ ಸಿಗುತ್ತಿಲ್ಲ. ಇದು ಸರ್ಕಾರದ ದುಸ್ಥಿತಿಯ ಸಂಕೇತವಾಗಿದೆ. ರಾಜ್ಯದಲ್ಲಿ ಬಡವರು, ಮಧ್ಯಮ ವರ್ಗದವರು ಸಂಕಷ್ಟದಲ್ಲಿದ್ದಾರೆ ಎಂದು ಕಿಡಿಕಾರಿದ್ರು.


