Tuesday, January 27, 2026
18.4 C
Bengaluru
Google search engine
LIVE
ಮನೆSportsಕಡೆಗೂ ಗೆದ್ದ ಕ್ರಿಕೆಟ್ ಗೆ ಘನತೆ ತಂದು ಕೊಟ್ಟ ಕೊಹ್ಲಿ

ಕಡೆಗೂ ಗೆದ್ದ ಕ್ರಿಕೆಟ್ ಗೆ ಘನತೆ ತಂದು ಕೊಟ್ಟ ಕೊಹ್ಲಿ

ಅರ್ಧ ಆಯಸ್ಸನ್ನು RCBಯಲ್ಲೇ ಕಳೆದವನಿಗೆ.. ಆಯಸ್ಸಿನ ಕೊನೆಯವರೆಗೂ ಆರ್.ಸಿ.ಬಿ ಮೇಲೆ ನನ್ನ ನಿಯತ್ತು ಎಂದವನಿಗೆ.. ಕೊನೆಗೂ ಒಲಿಯಿತು ಆ ಮಾಯಾಜಿಂಕೆ..! 18 ವರ್ಷ.. ಅದೆಷ್ಟು ಮೂದಲಿಕೆಗಳು.. ಅದೆಷ್ಟು ನಿಂದನೆಗಳು.. ಅದೆಷ್ಟು ಅವಮಾನಗಳು..!
ಪ್ರಿಯ ವಿರಾಟ್..,
ಅದೊಂದು ಕಪ್ ವಿಚಾರದಲ್ಲಿ ನಿನ್ನನ್ನು ಹೀಯಾಳಿಸಿದವರೆಷ್ಟೋ.. ನಿನಗೆಂದೂ ಐಪಿಎಲ್ ಕಪ್ ಸಿಗದು ಎಂದು ಷರಾ ಬರೆದವರೆಷ್ಟೋ.. ಆ ಟ್ರೋಫಿ ನಿನ್ನ ಪಾಲಿಗೆ ಎಂದೂ ಸಿಗದು ಎಂದವರೆಷ್ಟೋ..
ಕೊನೆಗೆ..?
18 ವರ್ಷಗಳ ನಂತರ ನಿನ್ನ ಕೈಯಲ್ಲಿ ಐಪಿಎಲ್ ಕಪ್ ಮಿನುಗುತ್ತಿದೆ ಎಂದರೆ ಅದು ನಿನ್ನ ನಿಯತ್ತಿಗೆ ಸಂದ ಗೆಲುವು.
ನಾನು ಬ್ಯಾಟ್ ಹಿಡಿಯುವ ಕೊನೆಯ ಕ್ಷಣದವರೆಗೂ RCB ಪರ ಆಡುತ್ತಲೇ ಇರುತ್ತೇನೆ. ನನ್ನ ದೇಹದ ಮೇಲೆ ಆರ್.ಸಿ.ಬಿ ಜರ್ಸಿ ಹೊರತಾಗಿ ಮತ್ತೊಂದು ಬಟ್ಟೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ
ಎಂದಿದ್ದ ವಿರಾಟ್.. ಇವತ್ತಿಗೂ ಅದನ್ನೇ ಹೇಳುತ್ತಿದ್ದಾನೆ.. ಎಂಥಾ ನಿಯತ್ತು..!
‘ನಾನು ಆರ್.ಸಿ.ಬಿಯಿಂದ ಹೊರ ಬರುತ್ತೇನೆ’ ಎಂದು ವಿರಾಟ್ ಒಂದು ಮಾತು ಹೇಳಿದ್ದರೆ ಸಾಕಿತ್ತು.. ಐಪಿಎಲ್ ಚರಿತ್ರೆಯೇ ಬೆರಗಾಗುವಷ್ಟರ ಮಟ್ಟಿಗೆ ಕೋಟಿಗಳ ಲೆಕ್ಕದಲ್ಲಿ ಬೆಲೆ ಕಟ್ಟಲು ಸಿದ್ಧರಿದ್ದರು, ರೆಡ್ ಕಾರ್ಪೆಟ್ ಸ್ವಾಗತದೊಂದಿಗೆ.. ಆದರೆ ‘ನಾನೆಂದಿಗೂ ಆರ್.ಸಿ.ಬಿ ಬಿಟ್ಟು ಹೋಗಲಾರೆ’ ಎಂದು ಬಿಟ್ಟ ವಿರಾಟ್.
ದುಡ್ಡಿಗಿಂತ ಕ್ರಿಕೆಟ್ ಬದುಕು ಕಟ್ಟಿಕೊಟ್ಟ..,  ಅವನು ಏನೂ ಅಲ್ಲದಿದ್ದಾಗ ಅವಕಾಶ ಕೊಟ್ಟ..,
ನಿರೀಕ್ಷೆಗಳನ್ನು ಹುಸಿಗೊಳಿಸಿ ಎಡವಿ ಬಿದ್ದಾಗ ಕೈ ಹಿಡಿದು ಮೇಲೆತ್ತಿದ.., ನೀನು ನನ್ಮ ಹೆಮ್ಮೆ, ನೀನು ನಮ್ಮ ಗರ್ವ, ನೀನು ನಮ್ಮ ಕಿರೀಟ ಎಂದು ತಲೆಯ ಮೇಲೆ ಹೊತ್ತು ಮೆರೆಸಿದ ಫ್ರಾಂಚೈಸಿಯನ್ನು ತೊರೆಯಲು ಬಿಡಲಿಲ್ಲ ಆ ನಿಯತ್ತು. 
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ವಿರಾಟ್ ಕೊಹ್ಲಿ ಎದೆಯಲ್ಲಿ ಇಂಥಾ ನಿಯತ್ತನ್ನು ತಂದವರು ಆ ತಂಡದ ನಿಯತ್ತಿನ ಅಭಿಮಾನಿಗಳು.. ವಿರಾಟ್ ಕೊಹ್ಲಿ ಆಡಿದ್ದು, ಆಡುತ್ತಿರುವುದು ಆ ಅಭಿಮಾನಿಗಳಿಗಾಗಿ. ಇಂಥಾ ಅಭಿಮಾನಿಗಳು ಯಾವ ತಂಡಕ್ಕೂ ಸಿಗಲಾರರು. ಅಷ್ಟರ ಮಟ್ಟಿಗೆ ಆರ್.ಸಿ.ಬಿ ಧನ್ಯ..
ಮಹಾಭಾರತ ಯುದ್ಧ ನಡೆದದ್ದು 18 ದಿನ.. 18ನೇ ದಿನ ಕುರುಕ್ಷೇತ್ರದಲ್ಲಿ ಕೌರವರ ವಿರುದ್ಧ ಪಾಂಡವರ ವಿಜಯ ದುಂಧುಬಿ ಮೊಳಗಿತ್ತು.. ರಾಯಲ್ ಚಾಲೆಂಜರ್ಸ್’ನ ಅರ್ಜುನನಿಗೆ ಅದೊಂದು ಮಹಾ ಗೆಲುವು ಸಿಕ್ಕಿರುವುದು 18 ವರ್ಷಗಳ ನಂತರ..
ಹುಡುಗನಾಗಿ ಬೆಂಗಳೂರು ತಂಡಕ್ಕೆ ಕಾಲಿಟ್ಟಿದ್ದವನು ಇವತ್ತು ಕ್ರಿಕೆಟ್ ಲೋಕದ ದಿಗ್ಗಜನಾಗಿ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಟಿ20 ಲೀಗ್’ನ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾನೆ.
ವಿರಾಟ್ ಕೊಹ್ಲಿಗೆ ಈ ಟ್ರೋಫಿ ಅದೆಷ್ಟು ಮುಖ್ಯವಾಗಿತ್ತು ಎಂಬುದಕ್ಕೆ ಸಾಕ್ಷಿ ಅವನು ಹಾಕಿದ ಕಣ್ಣೀರು. ವಿರಾಟ್ ಕೊಹ್ಲಿಯ ಗೆಲುವು ಐಪಿಎಲ್ ಗೆಲುವು.. ಕೊಹ್ಲಿ ಗೆಲುವು ಕ್ರಿಕೆಟ್’ನ ಗೆಲುವು.. ವಿರಾಟ್ ಕೈಯಲ್ಲಿ ಆ ಕಪ್ ಇಲ್ಲದೆ ಐಪಿಎಲ್ ಚರಿತ್ರೆಯೇ ಅಪೂರ್ಣವಾಗುತ್ತಿತ್ತು.
2008: ಅಂಡರ್-19 ವಿಶ್ವಕಪ್
2011: ಏಕದಿನ ವಿಶ್ವಕಪ್
2017, 2018, 2019: ಟೆಸ್ಟ್ ಕಿರೀಟ
2013, 2025: ಚಾಂಪಿಯನ್ಸ್ ಟ್ರೋಫಿ
2024: ಟಿ20 ವಿಶ್ವಕಪ್
2025: ಐಪಿಎಲ್ ಕಪ್
ಕ್ರಿಕೆಟ್’ಗೆ ಘನತೆ ತಂದು ಕೊಟ್ಟ ವಿರಾಟ್ ಕೊಹ್ಲಿ ಗೆದ್ದಿದ್ದಾನೆ.. ಎಲ್ಲವನ್ನೂ.. ಎಲ್ಲರ ಹೃದಯವನ್ನು.
– ಸುದರ್ಶನ್
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments