ಧಾರವಾಡ: ಕಳೆದ ಐದು ವರ್ಷಗಳಿಂದ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸುತ್ತಲೇ ಬಂದಿದ್ದರೂ, ಆದರೆ ಇದನ್ನು ಕೇಂದ್ರ ಸರ್ಕಾರ ಮಾಡಲಿಲ್ಲ.ಈಗ ಬಿಹಾರ ಚುನಾವಣೆ ಬಂದಿರುವುದರಿಂದ ಹೊಸದು ಏನಾದರೊಂದು ಮಾಡಬೇಕು ಎಂದು, ಕೇಂದ್ರ ಸರ್ಕಾರ ಈಗ ಜನಗಣತಿ, ಜಾತಿಗಣತಿಯನ್ನು ತಂದಿದೆ. ಇದೊಂದು ರೀತಿಯಲ್ಲಿ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಸಿಕ್ಕ ಫಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಧಾರವಾಡದಲ್ಲಿ ಹೇಳಿದ್ದಾರೆ.
ಮೊದಲು ಕೇಂದ್ರದವರು ಜನಗಣತಿ ಮಾಡುವುದಿಲ್ಲ ಎಂದು ಹೇಳಿದ್ದರು.ರಾಜ್ಯ ಸರ್ಕಾರ ಜಾತಿ ಜನಗಣತಿ ಮಾಡಿದಾಗ ಅದಕ್ಕೆ ಕೇಂದ್ರದವರು ಟಿಪ್ಪಣಿ ಕೊಡುತ್ತಿದ್ದರು. ನಾವು ಹಿಂದುಳಿದ ಜಾತಿಗಳಿಗೆ 54 ಪ್ಯಾರಾ ಮೀಟರ್ ಸೆಟ್ ಮಾಡಿದ್ದೇವೆ. ಒಬಿಸಿಯವರು ಎಷ್ಟು ಜನ ಇದ್ದಾರೆ ಎಂದು ಬಿಜೆಪಿಯವರು ಕೇಳುತ್ತಿದ್ದರು. ಈಗ ಬಿಹಾರ ಚುನಾವಣೆ ಬಂದಿರುವುದರಿಂದ ಏನಾದರೊಂದು ಚರ್ಚೆಗೆ ತರಬೇಕು ಎಂದು ಜನಗಣತಿ ತಂದು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಇದೆ,ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಅಲ್ಲಿ ಅವರು ಗಣತಿ ಮಾಡಲಿ. ಇಲ್ಲಿ ನಾವು ಮಾಡುತ್ತೇವೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡಬೇಡಿ ಎಂದು ಹೇಳುವ ಅಧಿಕಾರ ಇಲ್ಲ. ನಾವು ಗಣತಿ ಮಾಡಬೇಕು ಎಂದು ಉದ್ದೇಶಿಸಿದ್ದೆವು ಆ ಪ್ರಕಾರ ಮಾಡಿದ್ದೇವೆ.
ಕೇಂದ್ರದವರು ಈಗ ಗಣತಿ ಮಾಡಲು ಮುಂದೆ ಬಂದಿದ್ದಾರೆ ಮಾಡಲಿ. ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಒಬಿಸಿ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಐದು ವರ್ಷಗಳಿಂದ ರಾಹುಲ್ ಗಾಂಧಿ ಬಹಳ ಗಟ್ಟಿಯಾಗಿ ಮಾತನಾಡಿದ್ದಾರೆ. ಈ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಗಣತಿ ಮಾಡುತ್ತಿದ್ದರೆ ಅದು ರಾಹುಲ್ ಗಾಂಧಿ ಅವರಿಗೆ ಸಿಕ್ಕ ಜಯ ಎಂದು ನಾನು ಭಾವಿಸುತ್ತೇನೆ ಎಂದರು.