ಮಂಡ್ಯ : ವಿವಿಧ ಧರ್ಮಗಳು ಆಚರಿಸುವ ಧಾರ್ಮಿಕ ಪದ್ಧತಿಗಳು ಸಮುದಾಯವನ್ನು ಒಟ್ಟುಗೂಡಿಸುತ್ತದೆ. ಧಾರ್ಮಿಕ ಪದ್ಧತಿಗಳು ದೇಶದ ಪರಂಪರೆ ಕೂಡ ಆಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ಬಳಿಕ ನಡೆಯುತ್ತಿರುವ ಹುಚ್ಚಪ್ಪಸ್ವಾಮಿಯ ಹಾಗೂ ಹದಿನಾಲ್ಕು ಕೂಟದ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಚಲುವನಾರಾಯಣ ಸ್ವಾಮಿ ಭಾಗವಹಿಸಿ ಮಾತನಾಡಿದರು.
ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಪ್ರಮುಖವಾದದ್ದು, ಜನರು ಆಶಿರ್ವಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಕ್ತಿ ತುಂಬಿದೆ ಎಂದು ಹೇಳಿದರು.
ಜನರು ನಮ್ಮನ್ನು ಸೋಲಿಸಲಿ ಅಥವಾ ಗೆಲ್ಲಿಸಲಿ ಜಿಲ್ಲೆಯ ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ, ಸಿದ್ದರಾಮಯ್ಯ ಅವರು 2013 ರಲ್ಲಿ ಮುಖ್ಯಮಂತ್ರಿಗಳಾದಾಗ ನೀಡಿದ ರೂ 30 ಕೋಟಿ ಅನುದಾನದಲ್ಲಿ ನಾಗಮಂಗಲದಿಂದ ಬೆಳಗೊಳಕ್ಕೆ ರಸ್ತೆ ನಿರ್ಮಾಣ ಮಾಡಲಾಯಿತು, ಜನರಿಗೆ ಅನುಕೂಲವಾಗುವಂತೆ ಈ ಭಾಗದ ಎಲ್ಲಾ ಕೆರೆ ಕಟ್ಟೆಗಳನ್ನು ಏತ ನೀರವಾರಿ ಯೋಜನೆ ಮೂಲಕ ತುಂಬಿಸುವ ಸಲುವಾಗಿ ಹಳೆಯ ಅನುದಾನ ರೂ. 250 ಕೋಟಿ ಸೇರಿದಂತೆ 113 ಕೋಟಿ ಹಣವನ್ನು ಮುಖ್ಯಮಂತ್ರಿಗಳು 6 ತಿಂಗಳ ಹಿಂದೆಯೇ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ, ಇನ್ನೂ ಎರಡು ಮೂರು ವರ್ಷಗಳ ನಂತರ ನಾಗಮಂಗಲದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಲಾಗುವುದು, ಇದರ ಜೊತೆಗೆ ಎಲ್ & ಟಿ ನಲ್ಲಿ ಕೆ.ಆರ್.ಪೇಟೆ, ಪಾಂಡವಪುರ ನಾಗಮಂಗಲಕ್ಕೆ ಸುಮಾರು ರೂ 700 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ರಾಜ್ಯದ 224 ಮಳೆ ಆಶ್ರಿತ ತಾಲ್ಲೂಕುಗಳಿಗೆ ಕೃಷಿ ಹೊಂಡ ನಿರ್ಮಾಣಕ್ಕೆ ಅನುಮೋದನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ, ಇಂದು ಕೃಷಿ ಇಲಾಖೆಯಲ್ಲಿ ರೂ 1000 ಕೋಟಿಗೂ ಹೆಚ್ಚು ಸಹಾಯ ಧನವನ್ನು ರೈತರ ಅಭಿವೃದ್ಧಿಗಾಗಿ ನೀಡಲಾಗಿದೆ ಎಂದರು.ಬಸರಾಳು, ಒಣಕೆರೆ, ದೇವಲಾಪುರಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಿಕೊಡಬೇಕು ಎಂದು ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮದ್ದೂರು ವಿಧಾನಸಭಾ ಶಾಸಕ ಕೆ. ಉದಯ್, ಮಾಜಿ ಸಂಸದ ಶಿವರಾಮೇಗೌಡ, ಮೈಸೂರು ಸಕ್ಕರೆ ಕಾರ್ಖಾನೆ ಕಂಪನಿ ಅಧ್ಯಕ್ಷ ಸಿ.ಡಿ ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಸುರೇಶ್, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು..