ಬೆಂಗಳೂರು : ಯಲಹಂಕ ತಾಲ್ಲೂಕು ವಿಶೇಷ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸೇವೆಯಿಂದ ಅಮಾನತ್ತಾಗಿದ್ದಾರೆ.ಕೆಲ ದಿನಗಳ ಹಿಂದೆ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಜಮೀನು ಮಾಲೀಕನ ಹೆಸರನ್ನ ಪಹಣಿಯಲ್ಲಿ ಸೇರಿಸಲು ಹತ್ತು ಲಕ್ಷ ಬೇಡಿಕೆ ಇಟ್ಟಿದ್ದ. ಈ ವೇಳೆ 2 ಲಕ್ಷ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಮುನಿಶಾಮಿ ಸಿಕ್ಕಿಬಿದ್ದಿದ್ದ, ಇದನ್ನ ಗಂಭೀರವಾಗಿ ಪರಿಗಣಿಸಿದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮುನಿಶಾಮಿಯನ್ನ ಸೇವೆಯಲ್ಲಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಹಲಹಂಕ ತಹಶೀಲ್ದರ್ ಕಚೇರಿಯಲ್ಲಿ ಜಮೀನಿನ ಮಾಲೀಕರ ಹೆಸರನ್ನು ಸೇರಿಸಲು ರೂ. 10.00 ಲಕ್ಷಗಳಿಗೆ ಬೇಡಿಕೆ ಇಟ್ಟು, ಮುಂಗಡವಾಗಿ ರೂ. 3.00 ಲಕ್ಷ ಹಣ ಪಡೆದು, ನಂತರ ರೂ. 2.00 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿರುವ ಬಗ್ಗೆ ನಗರದ ವಕೀಲರಾದ ಮಹೇಶ ರವರು ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಫೆಬ್ರವರಿ 3 ರಂದು ಲೋಕಾಯುಕ್ತ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ರಡ್ ಹ್ಯಾಂಡ್ ಆಗಿ ಮುನಿಶಾಮಿ ಸಿಕ್ಕಿಬಿದ್ದಿದ್ದ.ವಿಶೇಷ ತಹಶೀಲ್ದಾರ್ ತಾಲ್ಲೂಕಿನ ವಿವಿಧ ಅರೆ ನ್ಯಾಯಿಕ ಪ್ರಕರಣಗಳ ಪೀಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಬೇಕಾಗಿದ್ದು, ಜವಾಬ್ದಾರಿಯುತವಾದ ಹುದ್ದೆಯಾಗಿರುತ್ತದೆ.
ಆದರೆ ಅಧಿಕಾರಿಯು ಮೇಲಧಿಕಾರಿಗಳ ಪೂರ್ವಾನುಮತಿ, ರಜೆ ಮಂಜೂರಾತಿ ಪಡೆಯದೆ ಫೆಬ್ರವರಿ 04, 2025 ರಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗುವ ಮೂಲಕ ಕಛೇರಿಯ ಸಾರ್ವಜನಿಕ ಮತ್ತು ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟು ಮಾಡಿರುವುದು ಕಂಡುಬರುತ್ತದೆ.ಅಲ್ಲದೆ, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಲೋಕಾಯುಕ್ತರಲ್ಲಿ ದಾಖಲಾದ ದೂರಿನ ಮೇರೆಗೆ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ ಎನ್ನಲಾದ ದಿನಾಂಕದಿಂದ ಅಧಿಕಾರಿಯು ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಈ ಅಧಿಕಾರಿಯು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತದೆ. ಅಧಿಕಾರಿಯವರ ಈ ವರ್ತನೆಯು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿಗಳು, 2021ಕ್ಕೆ ವಿರುದ್ಧವಾಗಿರುತ್ತದೆ.ಆದ್ದರಿಂದ, ಅವರು ಸರ್ಕಾರಿ ಸೇವೆಗೆ ಅನಧಿಕೃತ ಗೈರು ಹಾಜರಾಗುವ ಮೂಲಕ ತೋರಿರುವ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತೆಯನ್ನು ಹಾಗೂ ಲೋಕಾಯುಕ್ತ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಪರಿಗಣಿಸಿ, ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಅಗತ್ಯವೆಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಯಲಹಂಕ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಮುನಿಶಾಮಿರೆಡ್ಡಿ ರವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ. ಅವರು ಹುದ್ದೆಯ ಹಕ್ಕಿನ ಸ್ಥಾನವನ್ನು(ಲೀನ್) ತಹಶೀಲ್ದಾರ್ ಗ್ರೇಡ್-2, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಹುದ್ದೆಗೆ ವರ್ಗಾಯಿಸಿದೆ.
.