ಮಂಡ್ಯ: ದೂರದೃಷ್ಟಿಯ ಕನಸುಗಾರ, ರಾಜಕೀಯ ಸಂತೆಯೊಳಗಿನ ಸಂತ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ತಮ್ಮ ಬದುಕಿನ ಯಾತ್ರೆ ಮುಗಿಸಿ, ಪಂಚಭೂತಗಳಲ್ಲಿ ಲೀನವಾಗಿದ್ದಾರೆ.ಇಂದು (ಡಿ.11) ಸಂಜೆ ತಮ್ಮ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಹೊರವಲಯದ ಕೆಫೆ ಕಾಫಿ ಡೇ ಆವರಣದಲ್ಲಿ ಒಕ್ಕಲಿಗ ಸಂಪ್ರದಾಯಂತೆ ಹಾಗೂ ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯ್ತು. ಇದಕ್ಕೂ ಮುನ್ನ ಪೊಲೀಸರ ತಂಡದಿಂದ ರಾಷ್ಟ್ರಗೀತೆ ನಮನ ಸಲ್ಲಿಸಲಾಯಿತು. ನಂತರ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಪ್ರೇಮ ಕೃಷ್ಣ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಬಳಿಕ ಭಾನುಪ್ರಕಾಶ್ ಶರ್ಮಾ ಹಾಗೂ ಇತರ 15 ವೈದಿಕರ ತಂಡವು ಮಂತ್ರಘೋಷಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ, ಎಸ್.ಎಂ ಕೃಷ್ಣರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.