ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್. ಎಂ. ಕೃಷ್ಣ ಅವರು ನಿಧನರಾಗಿದ್ದಾರೆ. ಮಂಗಳವಾರ ನಸುಕಿನ ಜಾವ 2:30ರ ಸುಮಾರಿಗೆ ಬೆಂಗಳೂರಿನ ಸದಾಶಿವನಗರ ಮನೆಯಲ್ಲಿ ಕೊನೆಯುಸಿರು ಎಳೆದರು. ಎಸ್ಎಂ ಕೃಷ್ಣ ಅಂತ್ಯಕ್ರಿಯೆ ಅವರ ತವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ನಡೆಯಲಿದೆ.
ಮಂಗಳವಾರ ಬೆಳಗ್ಗೆಯಿಂದ ಬುಧವಾರದ ಬೆಳಗ್ಗೆ 8 ಗಂಟೆಯವರೆಗೆ ಬೆಂಗಳೂರಿನ ಸದಾಶಿವನಗರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸದಾಶಿವನಗರಕ್ಕೆ ಅನೇಕ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು. ಎಸ್ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಿದ್ದು, ಅವರ ತವರೂರು ಸೋಮಹಳ್ಳಿಗೆ ತೆರಳಲಿದೆ.
ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ
ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ 3 ಗಂಟೆಯ ನಂತರ ಶ್ರೀರಂಗಪಟ್ಟಣದ ಪುರೋಹಿತರಾದ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರದ ವಿಧಿ, ವಿಧಾನಗಳನ್ನು ನೇರವೇರಲಿವೆ. ಬಳಿಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ನಂತರ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಎಸ್ಎಂ ಕೃಷ್ಣ ಅವರು ಪಂಚಭೂತಗಳಲ್ಲಿ ಲೀನರಾಗುತ್ತಾರೆ.
ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ವಿವಿಧ ಹೂವಿಗಳಿಂದ ಆಲಂಕಾರ ಮಾಡಲಾಗಿದೆ. ಇದಕ್ಕಾಗಿ ಸೇವಂತಿಗೆ, ಗುಲಾಬಿ ಚೆಂಡು ಹೂವು ಸೇರಿದಂತೆ ವಿವಿಧ ರೀತಿಯ 300 ಕೆಜಿ ಹೂವುಗಳಿಂದ ಆಲಂಕಾರ ಮಾಡಲಾಗಿದೆ.
ಅಂತ್ಯಕ್ರಿಯೆಯಲ್ಲಿ ಗಣ್ಯರು ಭಾಗಿ
ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕ ಶಾಸಕರು ಹಲವು ಗಣ್ಯ, ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.