Thursday, January 29, 2026
18 C
Bengaluru
Google search engine
LIVE
ಮನೆ#Exclusive Newsಆಯುರ್ವೇದ ಅಂಶವುಳ್ಳ ಭಾರತೀಯ ಆಹಾರ ಪದ್ಧತಿ ಇಡೀ ಜಗತ್ತಿಗೆ ಮಾದರಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಆಯುರ್ವೇದ ಅಂಶವುಳ್ಳ ಭಾರತೀಯ ಆಹಾರ ಪದ್ಧತಿ ಇಡೀ ಜಗತ್ತಿಗೆ ಮಾದರಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಬೆಂಗಳೂರು: ರೋಗ ನಿರೋಧಕ ಶಕ್ತಿ, ಆಯುರ್ವೇದ ಅಂಶವುಳ್ಳ ಭಾರತೀಯ ಆಹಾರ ಪದ್ಧತಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಇಡೀ ಜಗತ್ತೇ ನಮ್ಮ ಆಹಾರ ಪದ್ಧತಿಯನ್ನು ಅಪೇಕ್ಷಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಬಿಹಾರ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಮಖಾನ’ ಸಿದ್ಧ ಆಹಾರೋತ್ಪನ್ನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಕೃಷಿ ಉತ್ಪನ್ನ ಹಾಗೂ ಆಹಾರೋತ್ಪನ್ನಗಳಲ್ಲಿ ಆಯುರ್ವೇದ ಗುಣವಿದ್ದು, ಮೆದುಳು, ಹೃದಯ ಮತ್ತು ದೇಹಾರೋಗ್ಯಕ್ಕೆ ಸದಾ ಚೈತನ್ಯ ತುಂಬುತ್ತದೆ. ಹೀಗಾಗಿ ಭಾರತದ ಆಹಾರ  ಶೈಲಿ, ಪದ್ಧತಿಯನ್ನು ಇಡೀ ಪ್ರಪಂಚವೇ ಅನುಸರಿಸುತ್ತಿದೆ ಎಂದು ಪ್ರತಿಪಾದಿಸಿದರು. ಅತ್ಯಂತ ಕಡಿಮೆ ಕೊಬ್ಬಿನಾಂಶ, ಪೌಷ್ಟಿಕತೆ, ಕ್ಯಾಲ್ಸಿಯಂ ಹೀಗೆ ಆರೋಗ್ಯಯುಕ್ತ ಆಹಾರ ಪದಾರ್ಥಗಳಿಂದಾಗಿ ನಮ್ಮ ಯುವ ಸಮುದಾಯವೂ ಸದೃಢವಾಗಿದೆ. ಹೀಗಾಗಿ ಇಡೀ ಜಗತ್ತೇ ಇಂದು ಔದ್ಯೋಗಿಕವಾಗಿ ಭಾರತೀಯ ಯುವ ಸಮುದಾಯವನ್ನು ತನ್ನತ್ತ ಸೆಳೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಭಾರತದ ಆಹಾರ ಪದ್ಧತಿ, ವ್ಯಾಯಾಮ ಪದ್ಧತಿ, ಯೋಗ ಪದ್ಧತಿ ಮತ್ತು ಭಾರತೀಯ ಕುಟುಂಬ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಜರ್ಮನ್ ನಂತಹ ರಾಷ್ಟ್ರಗಳು ಕೂಡ ಇಂದು ನಮ್ಮ ಆಹಾರ ಪದ್ಧತಿಯನ್ನು ಸ್ವೀಕರಿಸಲು ಸಿದ್ಧವಾಗಿವೆ. ಭಾರತೀಯ ಆಹಾರೋತ್ಪನ್ನಗಳಿಗೆ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿದೆ. ಒಂದು ಕಾಲದಲ್ಲಿ ರಾಗಿ ಗಂಜಿ, ರಾಗಿ ಮುದ್ದೆ, ರಾಗಿ ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿಯಂತಹ ಮನೆ ಅಡುಗೆಯೇ ನಮ್ಮ ಆರೋಗ್ಯ ಕಾಯುತ್ತಿತ್ತು. ಇಂತಹ ಆರೋಗ್ಯಯುತ ಆಹಾರ ಪದ್ಧತಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿದೆ ಎಂದು ಹೇಳಿದರು.

ಮನೆ ಅಡುಗೆ ಸವಿಯಿರಿ.. ಆರೋಗ್ಯವಾಗಿರಿ:

ಗೋಬಿ ಮಂಚೂರಿ, ಪಿಜ್ಜಾ, ಬರ್ಗರ್, ನೂಡಲ್ಸ್ , ಚಿಪ್ಸ್ ನಂತಹ ಫಾಸ್ಟ್ ಫುಡ್ ಗಳು ಇಂದಿನ ಯುವ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಅನಾರೋಗ್ಯಕ್ಕೆ ತಳ್ಳುತ್ತಿದೆ. ಫಾಸ್ಟ್​ ಫುಡ್​ ಪದ್ಧತಿಯಿಂದ ಯುವ ಸಮುದಾಯ ಬಹುಬೇಗನೇ ಹೃದಯಾಘಾತಕ್ಕೆ ಒಳಗಾಗುವಂತೆ ಆಗಿದೆ ಎಂದು ವಿಷಾದಿಸಿದ ಕೇಂದ್ರ ಸಚಿವರು, ಆಯುರ್ವೇದ ಅಂಶಯುಕ್ತ ಮನೆ ಅಡುಗೆಯನ್ನು ಸವಿಯುವಂತೆ ಕರೆ ನೀಡಿದರು.

ಬೆಂಗಳೂರಲ್ಲಿ  ಜನಪ್ರಿಯವಾದರೆ ಜಗತ್ತಿನಲ್ಲೇ ಪ್ರಸಿದ್ಧಿ:

ಯಾವುದೇ ಆಹಾರ ಉತ್ಪನ್ನಗಳಿರಲಿ ದೇಶ-ವಿದೇಶಿಗರನ್ನೂ ಒಳಗೊಂಡಿರುವ ನಮ್ಮ ಬೆಂಗಳೂರಿನಲ್ಲಿ ಜನಪ್ರಿಯವಾದರೆ ಇಡೀ ಜಗತ್ತಿನಲ್ಲೇ ಪ್ರಸಿದ್ಧಿ ಪಡೆಯುತ್ತವೆ. ಹೀಗಾಗಿಯೇ ಬಿಹಾರದ ‘ಮಖಾನ’ ಆಹಾರ ಪದಾರ್ಥಗಳನ್ನು ಮೊದಲು ಬೆಂಗಳೂರಲ್ಲಿ ಪರಿಚಯಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಇನ್ನು, ಬೆಂಗಳೂರಿನಲ್ಲಿ ನಡೆದ ‘ಮಖಾನ’ ಸಿದ್ಧ ಆಹಾರೋತ್ಪನ್ನ ಮಹೋತ್ಸವಲ್ಲಿ ಬಿಹಾರದ ಆರೋಗ್ಯ ಮತ್ತು ಕೃಷಿ ಸಚಿವ ಮಂಗಲ್ ಪಾಂಡೆ ಮತ್ತು ಕೃಷಿ, ತೋಟಗಾರಿಕೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments