Saturday, September 13, 2025
22.9 C
Bengaluru
Google search engine
LIVE
ಮನೆ#Exclusive NewsTop Newsಮುಡಾ ಕೇಸ್ : ಸಿಎಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಮುಡಾ ಕೇಸ್ : ಸಿಎಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿದನ್ನ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ವಿಭಾಗೀಯ ಪೀಠ ಜನವರಿ 20ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಸಿಎಂ ಪರ ವಕೀಲ ಅಭಿಷೇಕ್ ಮನುಸಿಂಘ್ವಿ, ಸರ್ಕಾರದ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್, ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ, ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್​ ವಿಭಾಗೀಯ ಪೀಠ ಮುಂದಿನ ವಿಚಾರಣೆಯನ್ನ ಜನವರಿ 25ಕ್ಕೆ ನಿಗದಿಪಡಿಸಿದೆ.

ಸಿಎಂ ಸಿದ್ದು ಪರ ಅಭಿಷೇಕ್ ಮನು ಸಿಂಘ್ವಿ ವಾದ:

ಏಕಸದಸ್ಯ ಪೀಠದ ಆದೇಶದಲ್ಲಿನ ಲೋಪ ತೋರಿಸುತ್ತೇನೆ. 17 ಎ ನಿಯಮವನ್ನು ಸಂಪೂರ್ಣವಾಗಿ ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಪೊಲೀಸ್ ಅಧಿಕಾರಿ ಮೂಲಕವೇ ಅನುಮತಿ ಕೋರಬೇಕು. ಆದರೆ ಹೈಕೋರ್ಟ್ ಏಕಸದಸ್ಯ ಪೀಠ ಇದನ್ನು ನಿರ್ಲಕ್ಷಿಸಿದೆ. ರಾಜ್ಯಪಾಲರು ಕ್ಯಾಬಿನೆಟ್‌ನ ಸಲಹೆ ಸೂಚನೆ ಪಾಲಿಸಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಹೈಕೋರ್ಟ್ ರಾಜ್ಯಪಾಲರ ಅನುಮತಿಯನ್ನು ಎತ್ತಿಹಿಡಿದಿದೆ. ಮುಖ್ಯಮಂತ್ರಿ ಪರವಾಗಿಯೇ ಸಚಿವ ಸಂಪುಟ ಇರುತ್ತದೆಂದು ತೀರ್ಪು ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠದ ಈ ತೀರ್ಪು ಪ್ರಶ್ನಿಸಿದ್ದೇವೆ. ಹೀಗಾಗಿ ಸಿಬಿಐ ತನಿಖೆ ಕೋರಿರುವ ಅರ್ಜಿ ವಿಚಾರಣೆಯನ್ನು ಮುಂದೂಡಬೇಕು. ಏಕಸದಸ್ಯ ಪೀಠದಲ್ಲಿರುವ ಡಿ.10 ರ ವಿಚಾರಣೆ ಮುಂದೂಡಬೇಕು ಎಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ, ಪ್ರತಿವಾದಿಗಳಿಗೆ ನೋಟಿಸ್ ನೀಡದೇ ವಾದ ಆಲಿಸಲು ಸಾಧ್ಯವಿಲ್ಲ ಎಂದರು. ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡುವಂತೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಬಳಿಕ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.

ಹಿರಿಯ ವಕೀಲ ಕಪಿಲ್ ಸಿಬಲ್ ವಾದವೇನು..?

ಮುಖ್ಯಮಂತ್ರಿಯನ್ನು ರಾಜ್ಯಪಾಲರು ಆಯ್ಕೆ ಮಾಡಿಲ್ಲ. ಹೀಗಾಗಿ ರಾಜ್ಯಪಾಲರಿಗೆ ತನಿಖೆ ಅನುಮತಿ ನೀಡುವ ಯಾವುದೇ ಅಧಿಕಾರವಿಲ್ಲ. ಸಾಂವಿಧಾನಿಕ ಪ್ರಶ್ನೆಗಳಿಗೆ ಹೈಕೋರ್ಟ್ ಉತ್ತರಿಸಬೇಕಿದೆ. ಅನುಮತಿ ನೀಡಬೇಕೆಂದರೆ ಏನಾದರೂ ಬಾಕಿ ಇರಬೇಕು. ಸರ್ಕಾರಿ ಅಧಿಕಾರಿಗಳಿಗಾದರೆ ನೇಮಕಗೊಳಿಸಿದವರು ಅನುಮತಿ ನೀಡಬಹುದು. ರಾಜ್ಯಪಾಲರಿಗೆ ಅನುಮತಿ ನೀಡುವ ಅಧಿಕಾರವಿಲ್ಲ. ಈ ರೀತಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಬಾರದು. ಹೀಗೆ ಮಾಡಿದರೆ ರಾಷ್ಟ್ರದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ಕಪಿಲ್ ಸಿಬಲ್ ವಾದಿಸಿದರು.

ದೇವರಾಜು ಪರ ವಕೀಲ ದುಷ್ಯಂತ್ ದವೆ ವಾದ:

ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಸಿಬಿಐ ತನಿಖೆ ಕೋರಿರುವ ಅರ್ಜಿ ವಿಚಾರಣೆ ಬಾಕಿ ಇದೆ. ಆ ಅರ್ಜಿಯ ವಿಚಾರಣೆಯನ್ನೂ ಮುಂದೂಡಬೇಕು. ನಮ್ಮ ಕಕ್ಷಿದಾರರಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ವಿಚಾರಣೆಗೆ ಒಳಪಡಬೇಕಾಗಿದೆ. ಹೀಗಾಗಿ ಮೇಲ್ಮನವಿ ಮೂಲಕ ಪ್ರಶ್ನಿಸಿದ್ದೇವೆ. ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಲೋಕಾಯುಕ್ತ ಪೊಲೀಸರ ತನಿಖೆ ಸ್ಥಿತಿಗತಿ ವರದಿ ಕೇಳಿದೆ. ಹೀಗಾಗಿ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ದೇವರಾಜು ಪರ ವಕೀಲ ದುಷ್ಯಂತ್ ದವೆ ವಾದ ಮಂಡಿಸಿದರು.

ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ.ರಾಘವನ್ ವಾದ:

ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಕೆ.ಜಿ ರಾಘವನ್ ವಾದ ಮಂಡಿಸಿ, ಹೈಕೋರ್ಟ್ ಏಕಸದಸ್ಯ ಪೀಠ ಕೇವಲ ನೋಟಿಸ್ ಜಾರಿಗೊಳಿಸಿದೆ. ಅಲ್ಲಿನ ವಿಚಾರಣೆಗೂ ಈ ಕೇಸ್ ಗೂ ಸಂಬಂಧವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments