ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದಡಿ ಖಾಸಗಿ ಶಾಲೆಯ ಮಾಜಿ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಖಾಸಗಿ ಶಾಲೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮೂರು ವರ್ಷ ತ್ಯಾಗರಾಜನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಈ ಶಾಲೆಗೆ ಗುರಪ್ಪ ನಾಯ್ಡು ಅಧ್ಯಕ್ಷರಾಗಿದ್ದಾರೆ. ಶಾಲೆಯಲ್ಲಿ 75ಕ್ಕೂ ಅಧಿಕ ಶಿಕ್ಷಕಿಯರು ಕೆಲಸ ಮಾಡುತ್ತಿದ್ದು, ಈ ಪೈಕಿ ಬಹುತೇಕರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರು. ಕೆಲ ಸಿಬ್ಬಂದಿ ತಮ್ಮ ಮಕ್ಕಳನ್ನು ಈ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಗುರಪ್ಪ ನಾಯ್ಡು ವಿಕೃತ ಕಾಮಿಯಾಗಿದ್ದು ಯಾವ ಹೆಣ್ಣುಮಕ್ಕಳನ್ನೂ ಬಿಡುವುದಿಲ್ಲ. ಅವರನ್ನು ಕಂಡರೆ ಶಾಲೆಯಲ್ಲಿ ಎಲ್ಲರೂ ಹೆದರುತ್ತಾರೆ. ತಮ್ಮ ಜತೆ ಇರುವ ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋ ಮಾಡಿಕೊಂಡು ಬೆದರಿಸುತ್ತಾರೆ. ನಾನು ಹೇಳಿದಂತೆ ಕೇಳದಿದ್ದರೆ ಈ ವಿಡಿಯೋಗಳನ್ನು ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಧಮ್ಮಿ ಹಾಕುತ್ತಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾಕಷ್ಟು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಬಡ ಕುಟುಂಬಗಳಿಗೆ ಸೇರಿದ ಈ ಹೆಣ್ಣುಮಕ್ಕಳು ಈ ವಿಚಾರವನ್ನು ಯಾರ ಬಳಿಯೂ ಹಂಚಿಕೊಳ್ಳಲಾಗದೆ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಈತನ ವಿರುದ್ಧ ದೂರು ನೀಡಿದರೆ ನಮ್ಮ ದೇ ಮರ್ಯಾದೆ ಹೋಗಲಿದೆ ಎಂದು ಯಾರೂ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನಗೂ ಲೈಂಗಿಕ ಕಿರುಕುಳ: ಈ ಶಾಲೆಯಲ್ಲಿ 2021ರಿಂದ 2023ರ ವರೆಗೆ ನಾನು ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಈ ವೇಳೆ ಗುರಪ್ಪ ನಾಯ್ಡು ಉದ್ದೇಶ ಪೂರ್ವಕವಾಗಿ ಕಚೇರಿಗೆ ಕರೆಸಿಕೊಂಡು ಅಸಭ್ಯವಾಗಿ ಮಾತನಾಡುವುದು, ದೇಹ ಸ್ಪರ್ಶಿಸುವುದು ಸೇರಿ ಹಲವು ರೀತಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈತನ ವರ್ತನೆಯಿಂದ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿ ದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.