ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ವರದಿ‌ ಸಲ್ಲಿಸಲು ರಾಜ್ಯ ಸರ್ಕಾರ ಆಯೋಗ ರಚನೆ ಮಾಡಿದೆ. ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಎರಡು‌ ತಿಂಗಳೊಳಗೆ ಸೂಕ್ತ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಶಿಕ್ಷಣ ಮತ್ತು ಸರಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಪ್ರಾಯೋಗಿಕ ಅಂಕಿಅಂಶ ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ಸೂಕ್ತ ಶಿಫಾರಸಿನೊಂದಿಗೆ ಆಯೋಗವು 2 ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಸಂಬಂಧ ಅ.28ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ವೇಳೆ ಯಾವ ದತ್ತಾಂಶದ ಆಧಾರದ ಮೇಲೆ ಒಳಮೀಸಲಾತಿ ನಿಗದಿ ಮಾಡಬೇಕೆಂಬ ಕುರಿತು ಪ್ರತ್ಯೇಕ ಆಯೋಗ ರಚಿಸಿ ವರದಿ ಪಡೆಯಲಾಗುವುದು. ಅಲ್ಲಿಯವರೆಗೂ ಯಾವುದೇ ನೂತನ ನೇಮಕಾತಿ ಅಧಿಸೂಚನೆ ಮಾಡುವುದಿಲ್ಲ ಎಂದು ತಿಳಿಸಲಾಗಿತ್ತು.

ಅದರಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿದೆ. ಈ ಮೂಲಕ ನಾಲ್ಕು ದಶಕಗಳ ಪರಿಶಿಷ್ಟ ಜಾತಿಯ ಬೇಡಿಕೆಗೆ ಸರ್ಕಾರ ಸ್ಪಂದಿಸಿದಂತಾಗಿದೆ. ಇದರಿಂದ ಒಳಮೀಸಲು ಜಾರಿ ನಿರ್ಣಾಯಕ ಘಟ್ಟ ತಲುಪಿದಂತಾಗಿದೆ.

ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ಅಗತ್ಯ ದತ್ತಾಂಶವನ್ನು ಸಂಗ್ರಹಣೆನ್ನು ಎಲ್ಲಿಂದ ಮಾಡಬೇಕು ಎಂಬುವುದನ್ನು ಪರಿಶೀಲನೆ ಮಾಡಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಸಚಿವ ಸಂಪುಟ ನಿರ್ಧಾರದಂತೆ ಇಂದು (ನವೆಂಬರ್ 13) ನಿವೃತ್ತ ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights