ಬೀದರ್: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರ ತವರು ಜಿಲ್ಲೆ ಬೀದರ್ ನಲ್ಲಿ ಐತಿಹಾಸಿಕ ದೇವ ದೇವ ವನ ಪಾರ್ಕಿದೆ. ಆದ್ರೆ ಇವತ್ತು ಈ ಐತಿಹಾಸಿಕ ಪಾರ್ಕಿನ ಸ್ಥಿತಿ ಹೇಗಿದೆ ಅಂತ ನೋಡಿದ್ರೆ ಅತ್ತ ತಿರುಗಿಯೂ ನೋಡೋದಿಕ್ಕೆ ಸಾಧ್ಯವಾಗುತ್ತಿಲ್ಲ. ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಅಧೋಗತಿಯತ್ತ ಸಾಗಿದೆ. ಇನ್ನು ಪಾರ್ಕಿಗೆ ಜನ ಬಾರದೆ ಇರೋದು ಪುಂಡ ಪೋಕರಿಗಳಿಗೆ ಅಕ್ರಮ ಚಟುವಟಿಕೆ ನಡೆಸೋದಿಕ್ಕೆ ಹೇಳಿ ಮಾಡಿಸಿದ ಸ್ಥಳದಂತಾಗಿದೆ.

ಸುಮಾರು ಐವತ್ತು ಎಕರೆ ವಿಸ್ಥೀರ್ಣವುಳ್ಳ ಈ ಪಾರ್ಕಿನಲ್ಲಿ ಕುಡಿಯುವ ನೀರು ಇಲ್ಲ, ಶೌಚಾಲಯ ಮೊದಲೇ ಇಲ್ಲ. ಮೂಲಭೂತ ಸೌಕರ್ಯಗಳಿಲ್ಲದೆ ಪಾರ್ಕ್ ವೀಕ್ಷಣೆಗೆ ಬರುವವರು ಪರದಾಡುವಂತಾಗಿದೆ. ಇನ್ನು ಈ ಪಾರ್ಕಿನ ನಿರ್ವಹಣೆಯನ್ನ ಅರಣ್ಯ ಇಲಾಖೆ ನಡೆಸುತ್ತಿದ್ದು, ಮೂಲಭೂತ ಸೌಕರ್ಯ ಇಲ್ಲಿ ಮರೀಚಿಕೆಯಾಗಿದೆ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಐತಿಹಾಸಿಕ ಪಾರ್ಕ್ ವೀಕ್ಷಣೆಗೆಂದು ನಿತ್ಯ ಮೂನ್ನರಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಬಂದು ಹೋಗ್ತಾರೆ. ಪಾರ್ಕಿಗೆ ಎಂಟ್ರಿ ಫೀಸ್ ಕೂಡ ಇದ್ದು, ಎರಡರಿಂದ ಮೂರು ಸಾವಿರ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಈ ರೀತಿ ಬರೋ ಪ್ರವಾಸಿಗರಿಂದ ಹಣ ಪಡೆಯೋ ಇಲಾಖೆ ಪಾರ್ಕಿನ ಅಭಿವೃದ್ದಿಗೆ ಆ ಹಣವನ್ನ ಬಳಸದೇ ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆ ಹಾಕುತ್ತಿದ್ದಾರೆ.

ಇನ್ನು ಬೀದರ್ ನಗರದ ಯಾವುದೇ ಪಾರ್ಕಿನಲ್ಲಿ ಸ್ವಿಮ್ಮಿಂಗ್ ಫೂಲ್ ವ್ಯವಸ್ಥೆ ಇಲ್ಲ, ಆದ್ರೆ ದೇವ ದೇವ ವನದಲ್ಲಿ ಸ್ವಿಮ್ಮಿಂಗ್ ಫೂಲ್ ಇತ್ತು. ಅದನ್ನು ಕೂಡ ಸರಿಯಾಗಿ ಬಳಕೆ ಮಾಡದ ಪರಿಣಾಮ ಸಂಪೂರ್ಣ ಹಾಳಾಗಿದ್ದು, ಸ್ಮಿಮ್ಮಿಂಗ್ ಪೂಲ್ ಬಳಿಯ ಕೋಣೆಗಳನ್ನು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇನ್ನಾದ್ರೂ ಈ ಐತಿಹಾಸಿಕ ಪಾರ್ಕಿನ ಅಭಿವೃದ್ದಿಗೆ ಅರಣ್ಯ ಇಲಾಖೆ ಮನಸ್ಸು ಮಾಡುತ್ತಾ. ತಮ್ಮದೇ ತವರು ಜಿಲ್ಲೆಯಲ್ಲಿರುವ ಪಾರ್ಕಿನ ಅಭಿವೃದ್ದಿಗೆ ಸ್ವತಃ ಅರಣ್ಯ ಸಚಿವರಾಗಿರುವ ಈಶ್ವರ್ ಖಂಡ್ರೆ ಮುಂದಾಗ್ತಾರಾ ಕಾದು ನೋಡಬೇಕು.