ಹೆಸರಾಂತ ಆರ್ಥಿಕ ತಜ್ಞರಾಗಿದ್ದ, ಹಾಗೂ ಪ್ರಧಾನಿಗೆ ಆರ್ಥಿಕ ಸಲಹೆ ನೀಡುವ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಬಿಬೇಕ್ ದೇಬರಾಯ್ ಅವರು ಇಂದು ಶುಕ್ರವಾರ (ನ. 1) ಬೆಳಗ್ಗೆ 7 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. 1955ರಲ್ಲಿ ಮೇಘಾಲಯದಲ್ಲಿ ಜನಿಸಿದ ಬಿಬೇಕ್ ದೇವರಾಯ್ ಅವರು ಪತ್ನಿಯನ್ನು ಅಗಲಿದ್ದಾರೆ. ಕೆಲ ವರ್ಷಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು.
ಬಿಬೇಕ್ ದೇಬ್ರಾಯ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ಡಾ. ಬಿಬೇಕ್ ದೇಬ್ರಾಯ್ ಅವರು ಆರ್ಥಿಕತೆ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆದ್ಯಾತ್ಮ ಮತ್ತಿತರ ವಿಚಾರಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಭಾರತದ ಬೌದ್ಧಿಕ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿ ಹೋಗಿದ್ದಾರೆ. ಸಾರ್ವಜನಿಕ ನೀತಿಗೆ ಕೊಡುಗೆ ನೀಡುವುದರ ಜೊತೆಗೆ, ನಮ್ಮ ಪ್ರಾಚೀನ ಪಠ್ಯಗಳೊಂದಿಗೆ ಕೆಲಸ ಮಾಡಲು ಖುಷಿ ಪಡುತ್ತಿದ್ದರು,’ ಎಂದು ನರೇಂದ್ರ ಮೋದಿ ಎಕ್ಸ್ ಪೋಸ್ಟ್ನಲ್ಲಿ ಬರೆದು ಕೊಂಡಿದ್ದಾರೆ.