ಕಾರವಾರ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ದೋಷಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಮೊದಲನೇ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಏನಿದು ಪ್ರಕರಣ?
ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ 2010ರಲ್ಲಿ ನಡೆದಿದ್ದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಸಿಬಿಐ ಬಂಧಿಸಿತ್ತು. ಬೇಲೇಕೇರಿ ಅದಿರು ಸಾಗಾಟ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿತ್ತು. ನ್ಯಾಯಾಲಯ ಆದೇಶ ನೀಡುತ್ತಿದ್ದಂತೆ ಕೈ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಿರುವ ಕೇಂದ್ರಿಯ ತನಿಖಾ ದಳದ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯದ್ರು.
ಈ ಅದಿರನ್ನು ಕಾಯ್ದುಕೊಳ್ಳುವಂತೆ ಬೇಲೆಕೇರು ಬಂದರು ನಿರ್ವಹಿಸುತ್ತಿದ್ದ ಬಂದರು ಇಲಾಖೆಗೆ ಅರಣ್ಯ ಇಲಾಖೆಯು ಸೂಚನೆಯನ್ನು ನೀಡಿತ್ತು. ಕೆಲವು ತಿಂಗಳ ಬಳಿಕ ಅರಣ್ಯ ಇಲಾಖೆ ತಂಡ ಮರು ಪರಿಶೀಲಿಸಿದಾಗ ಬಂದರಿನಲ್ಲಿ ಕೇವಲ 2 ಲಕ್ಷ ಮೆಟ್ರಿಕ್ ಟನ್ ಅದಿರು ಮಾತ್ರ ಇತ್ತು. 250 ಕೋಟಿ ರೂ. ಅದಿರು ನಾಪತ್ತೆ ಬಗ್ಗೆ ಬಂದರು ಅಧಿಕಾರಿ, ಅದಿರು ಸಾಗಣೆ ಕಂಪನಿಗಳ ವಿರುದ್ಧ ಅರಣ್ಯ ಇಲಾಖೆಯು ದೂರು ನೀಡಿತ್ತು.
ಈ ಅಕ್ರಮವೆಸಗಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿ ಒತ್ತಾಯ ಮಾಡಿದ್ದರು. ಆಗ ಹಗರಣ ಬೆಳಕಿಗೆ ಬಂದಿತ್ತು. 2010ರ ಜೂ.23ರಂದು ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. 2011ರಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು.
ಸುಪ್ರೀಂಕೋರ್ಟ್ 2009 ರಿಂದ ಮೇ 2010ರ ನಡುವೆ ರಾಜ್ಯದಲ್ಲಿನ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಸಿಬಿಐ 2013ರ ಸೆ.13 ರಂದು ಕೇಸ್ ದಾಖಲಿಸಿ ತನಿಖೆಕೈಗೊಂಡಿತ್ತು.
ಸತೀಶ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಕಂಡುಬಂತು. ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ರವಾನೆ ಮಾಡಲಾಗಿತ್ತು ಎಂಬುದನ್ನು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
2ನೇ ಕೇಸ್ ವಂಚನೆ ಪ್ರಕರಣದಲ್ಲಿ 7 ವರ್ಷ ಹಾಗೂ ಕಳ್ಳತನ ಪ್ರಕರಣದಲ್ಲೂ 7 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಎಲ್ಲಾ ಪ್ರಕರಣಗಳಲ್ಲೂ ಸತೀಶ್ ಸೈಲ್ಗೆ 7 ವರ್ಷ ಶಿಕ್ಷೆ ಪ್ರಕಟಿಸಲಾಗಿದ್ದು, ದಂಡವನ್ನೂ ವಿಧಿಸಲಾಗಿದೆ. 1ನೇ ಕೇಸ್ನಲ್ಲಿ 9.36 ಕೋಟಿ, 2ನೇ ಕೇಸ್ನಲ್ಲಿ 9.20 ಕೋಟಿ, 3ನೇ ಕೇಸ್ನಲ್ಲಿ 9.36 ಕೋಟಿ, 4ನೇ ಕೇಸ್ನಲ್ಲಿ 9.54 ಕೋಟಿ, 5ನೇ ಕೇಸ್ನಲ್ಲಿ 9.25 ಕೋಟಿ, 6ನೇ ಕೇಸ್ನಲ್ಲಿ 90 ಲಕ್ಷ ರೂ. ದಂಡ ವಿಧಿಸಿದೆ.
ಶಾಸಕ ಸ್ಥಾನ ಅನರ್ಹ
ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದ ಕಾರಣ ಸತೀಶ್ ಸೈಲ್ ಶಾಸಕ ಸ್ಥಾನವೂ ಅನರ್ಹಗೊಳ್ಳಲಿದೆ. ಇದೀಗ ಸೈಲ್ಗೆ 7 ವರ್ಷದಷ್ಟು ಜೈಲು ಶಿಕ್ಷ ಆಗಿದೆ. ಹೀಗಾಗಿ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.