ಶಿಗ್ಗಾವಿ: ರಾಜ್ಯದಲ್ಲಿ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಸಲ್ಲಿಸುವ ಕಾರ್ಯ ಮುಕ್ತಾಯಗೊಂಡಿದೆ. ಅಕ್ಟೋಬರ್ 30ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ ಬಿಜೆಪಿಯಿಂದ ಭರತ್ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ಸಿನಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಯ್ಯದ್ ಅಜ್ಜಂಪೀರ್ ಖಾದ್ರಿ ಮತ್ತು ಮಂಜುನಾಥ್ ಕನ್ನೂರು ಕೂಡಾ ನಾಮಪತ್ರ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿತ್ತು. ಆದರೆ ಇದೀಗ ಖಾದ್ರಿ ಅವರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಶಿಗ್ಗಾವಿಯಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ನಿರ್ಣಾಯಕ ಪಾತ್ರವಹಿಸುವುದರಿಂದ ಕಾಂಗ್ರೆಸ್‌ನ ಸಾಂಪ್ರದಾಯಕ ಮತಗಳು ಬಂಡಾಯ ಅಭ್ಯರ್ಥಿಯಿಂದ ಹಂಚಿಹೋದರೆ ಕಾಂಗ್ರೆಸ್ ಸೋಲು ಖಚಿತ ಎನ್ನುವಂತಾಗಿತ್ತು. ಹಾಗಾಗಿ ಸಚಿವ ಜಮ್ಮೀರ್ ಅಹಮದ್ ಖಾನ್ ಅವರು ಇಂದು ಕಾವೇರಿ ನಿವಾಸಕ್ಕೆ ಖಾದ್ರಿ ಅವರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಅವರು ಬಳಿ ಕರೆತಂದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಖಾದ್ರಿ ಅವರನ್ನು ಸಮಾಧಾನಪಡಿಸಿ ನಾಮಪತ್ರ ವಾಪಸ್ ಪಡೆಯಲು ಸೂಚನೆ ನೀಡಿದ್ದಾರೆ.
ಬಂಡಾಯ ಅಭ್ಯರ್ಥಿ ಖಾದ್ರಿ ಅವರನ್ನು ಮನವೊಲಿಸಲು ಮುಂದಾದ ಅಲ್ಪಸಂಖ್ಯಾತ ಸಚಿವರುಗಳಾದ ರಹೀಂ ಖಾನ್, ಜಮ್ಮೀರ್ ಅಹಮದ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಅವರು ನಿಮ್ಮ ಜೊತೆ ನಾವು ಇದ್ದೇವೆ ಎಂದು ಖಾದ್ರಿ ಅವರಿಗೆ ಭರವಸೆ ನೀಡಿದ್ದಾರೆ. ಸಮುದಾಯದ ನಾಯಕರ ಮಾತಿನ ಬಳಿಕ ಅಂತಿಮವಾಗಿ ಸಿಎಂ ಜೊತೆ ಮಾತುಕತೆ ನಡೆಸಲಾಯಿತು. ಈ ವೇಳೆ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್ ರನ್ನು ಬೆಂಬಲಿಸೋದಾಗಿ ಸಿಎಂ ಗೆ ಖಾದ್ರಿ ಹೇಳಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯಲು ಖಾದ್ರಿ ನಿರ್ಧಾರ ಮಾಡಿದ್ದು, ಅಕ್ಟೋಬರ್ 30 ನಾಮಪತ್ರವನ್ನು ಹಿಂಪಡೆಯಲಿದ್ದಾರೆ.