ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಜಟಾಪಟಿಯ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆಯನ್ನು ನೀಡಿದ್ದಾರೆ.
ಹುಬ್ಬಳ್ಳಿಗೆ ತೆರಳಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಪರಿಷತ್ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆಯನ್ನು ಸಲ್ಲಿಸಿದರು. ಈ ಮೂಲಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಅಖಾಡಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ. ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲ. ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಆದರೆ ಜೆಡಿಎಸ್ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗುವ ಆಸೆಯಿದೆ. ಇನ್ನೂ ಅವಕಾಶವಿದೆ. ಹೈಕಮಾಂಡ್ ಒಂದು ಅವಕಾಶ ನೀಡಬೇಕು. ನಮ್ಮ ಪಕ್ಷ ನಾಯಕರು ನನ್ನ ಜೊತೆಗಿದ್ದಾರೆ. ಆದರೆ ಕುಮಾರಸ್ವಾಮಿ ಒಪ್ಪಿಗೆಗೆ ಸೂಚನೆ ನೀಡಿಲ್ಲ. ಹೀಗಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಉಪಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ. ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರನಾಗಿದ್ದೇನೆ ಎಂದು ಹೇಳಿದರು.

ಸಿಪಿವೈ ಬಂಡಾಯ ವಿಚಾರವಾಗಿ ಭಾನುವಾರ ಮಾತನಾಡಿದ್ದ ಎಚ್‌ಡಿ ಕುಮಾರಸ್ವಾಮಿ, ಸಿಪಿವೈ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು. ಅದರಲ್ಲಿ ಡಿಕೆ ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದಿದ್ದರು. ಆದರೆ ಇದನ್ನು ಡಿಕೆಶಿ ನಿರಾಕರಣೆ ಮಾಡಿದ್ದರು.
ಎಚ್‌ಡಿಕೆ ಪರವಾಗಿ ನಿಂತಿದ್ದ ಬಿಎಸ್‌ವೈ
ಇನ್ನು ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಎಚ್‌ಡಿ ಕುಮಾರಸ್ವಾಮಿ ಅವರ ಪರವಾಗಿ ಮಾತನಾಡಿದ್ದರು. ಚನ್ನಪಟ್ಟಣದಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುವುದು ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದ್ದರು. ಈ ಮೂಲಕ ಚನ್ನಪಟ್ಟಣದಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬುವುದು ಸಿಪಿವೈಗೂ ಖಚಿತವಾಗಿತ್ತು.
ದಳಪತಿಗಳ ನಿವಾಸದಲ್ಲಿ ಗರುಗೆದರಿದ ರಾಜಕೀಯ
ಇನ್ನು ಸಿಪಿ ಯೋಗೇಶ್ವರ್ ರಾಜೀನಾಮೆಯಿಂದ ದಳಪತಿಗಳ ನಿವಾಸದಲ್ಲೂ ರಾಜಕೀಯ ಬೆಳವಣಿಗೆ ಗರಿಗೆದರಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ನಿವಾಸಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರನ್ನೇ ಚನ್ನಪಟ್ಟಣದಲ್ಲಿ ಕಣಕ್ಕೆ ಇಳಿಸಲು ಜೆಡಿಎಸ್ ಪ್ಲ್ಯಾನ್ ಮಾಡುತ್ತಿದೆ. ಇದೀಗ ಸಿಪಿವೈ ರಾಜೀನಾಮೆಯಿಂದಾಗಿ ಈ ಸಾಧ್ಯತೆಗಳು ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರ ನಿವಾಸದಲ್ಲಿ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್‌ಗೆ ಬರ್ತಾರಾ ಸಿಪಿವೈ?
ಸಿಪಿ ಯೋಗೇಶ್ವರ್ ಅವರು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ? ಅಥವಾ ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಾರಾ ಎಂಬುವುದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನಿಂದ ಅವರನ್ನು ಅಖಾಡಕ್ಕೆ ಇಳಿಸಲು ಪ್ರಯತ್ನಗಳು ನಡೆಯುತ್ತಿದೆ. ಆದರೆ ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ದೊರೆತಿಲ್ಲ. ಹೀಗಾಗಿ ಅವರ ಮುಂದಿನ ನಡೆಯೂ ಕುತೂಹಲಕ್ಕೆ ಕಾರಣವಾಗಿದೆ.


