ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಕ್ಷೇತ್ರವಾದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮೂರು ಪಕ್ಷಗಳಿಗೂ ಸವಾಲಾಗಿ ಪರಿಣಮಿಸಿದೆ. ಮೈತ್ರಿ ಅಭ್ಯರ್ಥಿಯ ಮೇಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ತೀರ್ಮಾನಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಚನ್ನಪಟ್ಟಣ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾ‌ರ್ ಮಹತ್ವದ ಸಭೆ ನಡೆಸಿದ್ದಾರೆ.

ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಬಹುದೊಡ್ಡ ಪ್ರಮಾಣದಲ್ಲಿ ಕೇಳಿಬರುತ್ತಿದೆ. ಆದರೆ ಈ ನಡುವೆ ಬಿಜೆಪಿಯಿಂದ ಬಂಡಾಯವೆದು ಯೋಗೇಶ್ವರ ಅವರು ಕಾಂಗ್ರೆಸ್‌ನತ್ತ ಬರುವ ಮಾತುಗಳು ಕ್ಷೇತ್ರದಲ್ಲಿ ಓಡಾಡುತ್ತಿದೆ. ಆದ್ದರಿಂದ ಈ ಎಲ್ಲ ಲೆಕ್ಕಾಚಾರಗಳ ಬಗ್ಗೆ ಚರ್ಚಿಸಿ, ಮಾಹಿತಿ ಸಂಗ್ರ ಹಿಸಲು ಡಿ.ಕೆ.ಶಿವಕುಮಾರ್ ಶನಿವಾರ ಕಾರ್ಯ ಕರ್ತರು ಹಾಗೂ ಮುಖಂಡರ ಸಭೆ ನಡೆಸಿದರು.

ವಿಧಾನಸಭೆ ಉಪಚುನಾವಣೆಯ ವೇಳಾಪಟ್ಟಿ ಘೋಷಣೆಯಾಗಿ ಅಧಿಸೂಚನೆ ಆರಂಭಗೊಂಡಿದ್ದರೂ, ಈವರೆಗೂ ಮೂರು ಪಕ್ಷಗಳು ಅಭ್ಯರ್ಥಿ ಹೆಸರು ಬಹಿರಂಗಪಡಿಸಿಲ್ಲ. ಆಡಳಿತಾರೂಢ ಕಾಂಗ್ರೆಸ್ ಜೆಡಿಎಸ್​- ಬಿಜೆಪಿಯ ಮೈತ್ರಿಪಕ್ಷವನ್ನು ಎದುರಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ತಯಾರಿ ನಡೆಸಿದೆ.  ಪ್ರತಿಯೊಬ್ಬರ ಜತೆಗೂ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ವದಂತಿಗಳ ನಡುವೆ ಹಲವು ಮಂದಿ ಹೆಸರು ಕೇಳಿ ಬಂದಿದ್ದು, ಹಾಗೂ ತಮ್ಮ ಆಲೋಚನೆಯಲ್ಲಿರುವ ಅಭ್ಯರ್ಥಿಯ ಹೆಸರನ್ನು ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ನಾನೇ ಅಭ್ಯರ್ಥಿ:

ಇನ್ನು ಸಭೆಯ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಚನ್ನಪಟ್ಟಣ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ನಿಂತರೂ ನಾನೇ ಅಭ್ಯರ್ಥಿ ಎಂದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಹೇಳಿದ್ದೇನೆ. ಮೊದಲು ಕಾರ್ಯಕರ್ತರ ಬಳಿ ಚರ್ಚೆ ಮಾಡುತ್ತಿದ್ದೇನೆ. ಅವರಿಗೆ ಏನು ಹೇಳಬೇಕೋ ಹೇಳುತ್ತಿದ್ದು ಅವರ ಅಭಿಪ್ರಾಯ ಕೇಳಿದ್ದೇನೆ. ರಾಜಕಾರಣ ಸಾಧ್ಯತೆಗಳ ಕಲೆ. ಯಾರು ಬೇಕಾದರೂ ಗೆಲ್ಲಬಹುದು ಯಾರೂ ಗಾಬರಿಯಾಗುವುದು ಬೇಡ. ಪ್ರಧಾನಮಂತ್ರಿಗಳ ಕ್ಷೇತ್ರವನ್ನೇ ರಾಮನಗರದಲ್ಲಿ ಗೆದ್ದಿದ್ದು, ಹೀಗಾಗಿ ಕಂಗೆಡಬೇಡಿ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರು ತಯಾರಿರಬೇಕು ಎಂದು ತಿಳಿಸಿದ್ದೇನೆ ಎಂದು ತಿಳಿಸಿದರು.

By Veeresh

Leave a Reply

Your email address will not be published. Required fields are marked *

Verified by MonsterInsights