Wednesday, April 30, 2025
24 C
Bengaluru
LIVE
ಮನೆರಾಜಕೀಯವಿಧಾನಸೌಧ, ವಿಕಾಸಸೌಧಗಳನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳನ್ನಾಗಿ ಮಾಡಿ

ವಿಧಾನಸೌಧ, ವಿಕಾಸಸೌಧಗಳನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳನ್ನಾಗಿ ಮಾಡಿ

ವಿಧಾನಸೌಧ, ವಿಕಾಸಸೌಧಗಳನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳನ್ನಾಗಿ ಮಾಡಿ – ಸರ್ಕಾರಕ್ಕೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ.

ವಿಧಾನಸೌಧ, ವಿಕಾಸಸೌಧಗಳ ಪಡಸಾಲೆಗಳು, ವಿಧಾನಮಂಡಲದ ಸಭಾಂಗಣಗಳು, ಸಚಿವರು ಮತ್ತು ಅಧಿಕಾರಿಗಳ ಕಚೇರಿಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳ ಪರವಾದ ಘೋಷಣೆಗಳನ್ನು ಫಲಕಗಳ ಮೂಲಕ ಅಳವಡಿಸಿ ಸರ್ಕಾರದ ಕನ್ನಡ ಬದ್ಧತೆಯನ್ನು ಸ್ಥಿರೀಕರಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಡಾ.ಬಿಳಿಮಲೆ ವಿಧಾನಸೌಧ, ವಿಕಾಸಸೌಧಗಳು ರಾಜ್ಯ ಆಡಳಿತದ ಶಕ್ತಿ ಕೇಂದ್ರಗಳಾಗಿದ್ದು, ಕರ್ನಾಟಕದ ಹೆಮ್ಮೆಯ ಪ್ರತೀಕಗಳಾಗಿವೆ. ಸಾರ್ವಜನಿಕರು, ಗಣ್ಯರು, ದೇಶ ವಿದೇಶಗಳ ಪ್ರತಿನಿಧಿಗಳು ವಿವಿಧ ಕೆಲಸ ಕಾರ್ಯಗಳಿಗೆ ಇಲ್ಲಿಗೆ ನಿರಂತರ ಭೇಟಿ ನೀಡುವುದಿದ್ದು, ಈ ಕಟ್ಟಡಗಳ ವಾಸ್ತುಶಿಲ್ಪಕ್ಕೆ ವಿಶ್ವಾದ್ಯಂತ ಜನರು ಮನಸೋತಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆ, ಸಂಸ್ಕೃತಿಗಳ ಪರವಾದ ಘೋಷಣೆಗಳು, ಉದ್ಧರಣಗಳನ್ನು ಫಲಕಗಳ ಮೂಲಕ ಈ ಎರಡೂ ಕಟ್ಟಡಗಳ ಪಡಸಾಲೆಗಳು, ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣಗಳು, ಸಚಿವರು, ಅಧಿಕಾರಿಗಳ ಕಚೇರಿಗಳಲ್ಲಿ ಅಳವಡಿಸಲು ರಾಜ್ಯ ಸರ್ಕಾರವು ಕ್ರಮ ವಹಿಸಿದ್ದಲ್ಲಿ ಈ ಕಟ್ಟಡಗಳ ವೈಭವದ ಮೂಲಕ ಕನ್ನಡದ ಅಸ್ಮಿತೆ ಇನ್ನಷ್ಟು ವಿಶ್ವಾತ್ಮಕವಾಗಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದಾರೆ.

ರಾಜ್ಯ ಸರ್ಕಾರವು ಸುವರ್ಣ ಕರ್ನಾಟಕ ಸಂಭ್ರಮ-೫೦ ರನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಈ ಕುರಿತಾದ ನಿರ್ಧಾರವು ಅರ್ಥಪೂರ್ಣ ಆಚರಣೆಗೆ ಪೂರಕವಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕುರಿತಂತೆ ನಿರ್ದಿಷ್ಟ ರೂಪುರೇಷೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ಒದಗಿಸಲಿದೆ ಎಂದು ಡಾ.ಬಿಳಿಮಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಹಾಜರಿದ್ದರು.

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments