ಬೆಂಗಳೂರು: ಭಾರತದ ಆರ್ಥಿಕತೆಗೆ ಅತಿದೊಡ್ಡ ಬಹುಮಾನ ಕೊಡುತ್ತಿರುವ ಬೆಂಗಳೂರು ಜಾಗತಿಕ ನಗರ. ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಉದ್ಯಾನ ನಗರಿ. ಆದರೆ, ಕಳೆದ ವರ್ಷ ಕಂಡ ಬರ ಪರಿಸ್ಥಿತಿ ನಗರದಲ್ಲಿ ಜಲಕ್ಷಾಮ ನಿರ್ಮಿಸಿತ್ತು. ಬೆಂಗಳೂರಿನಲ್ಲಿ ನೀರಿಲ್ಲ. ನಮ್ಮಲ್ಲಿಗೆ ಬನ್ನಿ ಎಂದು ಹೈದರಾಬಾದ್ನ ಪ್ರಮುಖರೇ ಹೇಳಿಕೆ ನೀಡುವ ಮಟ್ಟಕ್ಕೆ ಈ ಜಲಕ್ಷಾಮ ಬಿಂಬಿತವಾಗಿತ್ತು. ನಗರದ ವರ್ಚಸ್ಸಿಗೆ ಧಕ್ಕೆ ತಂದ ಈ ಬೆಳವಣಿಗೆ ಮತ್ತೆಂದೂ ಉಂಟಾಗಬಾರದು ಎಂದು ಕಾವೇರಿ 5ನೇ ಹಂತದಲ್ಲಿ ಹೆಚ್ಚುವರಿ 775 ಎಂಎಲ್ಡಿ ನೀರು ಪೂರೈಕೆ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೆ ಸಿದ್ಧಗೊಳಿಸಲಾಗಿದೆ. ಇಂದು 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ.
ಕಾವೇರಿ 5ನೇ ಹಂತದಿಂದ ಯಾರಿಗೆ ಲಾಭ? ಬೆಂಗಳೂರಿಗೆ ಈವರೆಗೆ 1,450 ಎಂಎಲ್ಡಿ ಕಾವೇರಿ ನೀರನ್ನು ನಗರದ ಮೂರನೇ ಎರಡು ಭಾಗದ ಜನರಿಗೆ ಪೂರೈಕೆ ಮಾಡಲಾಗುತ್ತಿತ್ತು. ಕಾವೇರಿ 5ನೇ ಹಂತದಿಂದ ಹೆಚ್ಚುವರಿ 775 ಎಂಎಲ್ಡಿ ನೀರು ಲಭ್ಯವಾಗಲಿದ್ದು, ನಗರದ ಇನ್ನೂ ಶೇ.33ರಷ್ಟು ಜನರಿಗೆ, ಅಂದರೆ, 50 ಲಕ್ಷ ಜನರಿಗೆ ಕಾವೇರಿ ನೀರು ಲಭ್ಯವಾಗಲಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 2008ರಲ್ಲಿ ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿಯ 7 ವಿಧಾನಸಭಾ ಕ್ಷೇತ್ರದ ಜನರ ಬಹುದಿನದ ಬೇಡಿಕೆ ಈ ಮೂಲಕ ಸಹಕಾರಗೊಳ್ಳುತ್ತಿದೆ. ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ)ಯಲ್ಲಿ ಇವತ್ತು ಚಾಲನೆ ಕೊಟ್ಟರೆ ಬೆಂಗಳೂರಿಗೆ ಯಾವಾಗ ನೀರು ಸಿಗಲಿದೆ? ಯೋಜನೆಗೆ ಚಾಲನೆ ನೀಡುತ್ತಿದ್ದತೆ ಯಾವುದೇ ವಿಳಂಬ ಇಲ್ಲದೇ ಬುಧವಾರದಿಂದಲೇ ಬೆಂಗಳೂರಿನ 110 ಹಳ್ಳಿ ವ್ಯಾಪ್ತಿಯ ಜನರಿಗೆ ಕಾವೇರಿ ನೀರು ಲಭ್ಯವಾಗಲಿದೆ.
ಕಾವೇರಿ 5 ಹಂತದ ಯೋಜನೆಯ ವೆಚ್ಚ ಎಷ್ಟು?ಈ ಯೋಜನೆಯ ವೆಚ್ಚ 5 ಸಾವಿರ ಕೋಟಿ ರು. ಆಗಿದ್ದು, ಈ ಪೈಕಿ ಎಂಜಿನಿಯರಿಂಗ್ ಕಾಮಗಾರಿಗೆ ಅಧಿಕೃತವಾಗಿ 4,336 ಕೋಟಿ ರು. ವೆಚ್ಚ ಮಾಡಲಾಗಿದೆ. ಭೂ ಸ್ವಾಧೀನ, ವಿವಿಧ ಕಾರ್ಯಗಳು ಸೇರಿದಂತೆ ಒಟ್ಟಾರೆ 5 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ.