ಚಿಕ್ಕಬಳ್ಳಾಪುರ: ಅಸ್ತಿ ವಿಚಾರವಾಗಿ ಗಂಡನೊಂದಿಗೆ ಜಗಳವಾಡಿಕೊಂಡು ಹೆಂಡತಿ ತವರು ಮನೆ ಸೇರಿದ್ದಕ್ಕೆ ಆಕ್ರೋಶಗೊಂಡ ಪತಿ, ಹೆಂಡತಿಯನ್ನ ಕರೆತರಲು ತವರು ಮನೆಗೆ ಬಂದಿದ್ದಾನೆ. ಈ ವೇಳೆ ನಡೆದ ಜಗಳದಲ್ಲಿ ಅಳಿಯ ಅತ್ತೆ ಹಾಗೂ ಮಾವನ ಮೇಲೆ ಮಚ್ಚಿನಿಂದ ಆಟ್ಯಾಕ್ ಮಾಡಿದ್ದಾನೆ. ಘಟನೆಯಲ್ಲಿ ಅತ್ತೆ ಸಾವನ್ನಪ್ಪಿದ್ದು ಮಾವ ಆಸ್ಪತ್ರೆಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಿಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂದಹಾಗೆ 43 ವರ್ಷದ ಕವಿತಮ್ಮ ಮೃತ ಹೆಂಗಸು ಹಾಗೂ ಆರೋಪಿಯ ಅತ್ತೆ. 30 ವರ್ಷದ ಚಂದ್ರು ಕೊಲೆ ಮಾಡಿರುವ ಅಳಿಯ. ಇನ್ನೂ ಘಟನೆಯಲ್ಲಿ ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡಿರುವ ಮಾವ ಈಶ್ವರಪ್ಪ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸಲಿಗೆ ಈಶ್ವರಪ್ಪ ತನ್ನ ಸಹೋದರಿ ಯಶೋಧಮ್ಮ ಪುತ್ರ ಚಂದ್ರುವಿಗೆ ತನ್ನ ಮಗಳು ಮಮತಾಳನ್ನ ಕೊಟ್ಟು ಮದುವೆ ಮಾಡಿಸಿದ್ದರು. ಆದ್ರೆ ಇಬ್ಬರ ನಡುವೆ ಆಸ್ತಿ ವಿವಾದದಿಂದ ಮಮತಾಳಿಗೆ ಗಂಡ ಚಂದ್ರು ಹಾಗೂ ಆಕೆಯ ಆತ್ತೆ ಯಶೋಧಮ್ಮ ಕಿರುಕುಳ ಕೊಡುತ್ತಿದ್ದರಂತೆ. ಇದರಿಂದ ಮನನೊಂದ ಮಮತಾ 10 ದಿನಗಳ ಹಿಂದೆ ತವರು ಮನೆಗೆ ವಾಪಸ್ಸಾಗಿದ್ದಳು.
ಮಂಗಳವಾರವಷ್ಟೇ ಮಮತಾಳನ್ನ ಕರೆದುಕೊಂಡು ಹೋಗಲು ಚಂದ್ರು ಆಕೆಯ ತವರು ಮನೆಗೆ ಬಂದಿದ್ದಾರೆ. ಈ ವೇಳೆ ತನ್ನ ಹೆಂಡತಿಯನ್ನು ಜೊತೆಗೆ ಕಳುಹಿಸಿಕೊಡುವಂತೆ ಅತ್ತೆ ಮಾವನನ್ನ ಕೇಳಿದ್ದಾನೆ. ಜೊತೆಗೆ ಆಸ್ತಿಯನ್ನು ಭಾಗ ಕೊಡುವಂತೆಯೂ ಕೇಳಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಳಿಯ ಚಂದ್ರು ಮಚ್ಚಿನಿಂದ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭಿರವಾಗಿ ಗಾಯಗೊಂಡಿದ್ದ ಅತ್ತೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅತ್ತೆಯ ಮೇಲೆ ಹಲ್ಲೆ ತಡೆಯಲು ಹೋದ ಮಾವ ಈಶ್ವರಪ್ಪ ತಲೆಗೂ ಗಂಭೀರವಾದ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಘಟನೆ ನಂತರ ಆರೋಪಿ ಅಳಿಯ ಚಂದ್ರು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮೃತ ಯಶೋಧಮ್ಮ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.