ಬೆಳಗಾವಿ:ಬಿಜೆಪಿಯವರು ಮಾಡಿದ ದ್ವೇಷದ ರಾಜಕಾರಣ ನಾವು ಯಾರೂ ಮಾಡಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅವರು ಎಷ್ಟು ಜನಕ್ಕೆ ಎಷ್ಟೆಲ್ಲಾ ತೊಂದರೆ ನೀಡಿದ್ದಾರೆ ಎಂಬುವುದಕ್ಕೆ ನಾನೇ ದೊಡ್ಡ ಸಾಕ್ಷಿ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಲಕರ್ಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕು ವರ್ಷ ಗಳಿಂದ ನಾನು ನನ್ನ ಕ್ಷೇತ್ರಕ್ಕೆ ಹೋಗಿಲ್ಲ. ಜನರು ಬೆಳಗಾವಿಗೆ ಬಂದು ನನ್ನ ಮುಂದೆ ನಿಲ್ಲುವ ಪರಿಸ್ಥಿತಿ ಬಂದಿದೆ ಅದಕ್ಕೆ ಕಾರಣವೇ ಬಿಜೆಪಿಯವ್ರು. ಕ್ಷೇತ್ರದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ, ಆದರೆ ಬೆಳಗ್ಗೆಯಿಂದ ರಾತ್ರಿಯವರೆಗೂ ಕ್ಷೇತ್ರದಿಂದ ಹೊರಗಿದ್ದು ಜನರ ಭೇಟಿ ಮಾಡುವ ಪರಿಸ್ಥಿತಿ ದ್ವೇಷ ರಾಜಕಾರಣ ದಿಂದ ಬಂದಿದೆ ಎಂದರು.ಪಂಚಮಸಾಲಿ ಹೋರಾಟದಲ್ಲಿ ನಮ್ಮ ಶಾಸಕರು ಧ್ವನಿ ಎತ್ತುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಾಸಕರು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ ಎಂಬ ಕೂಡಲಸಂಗಮ ಸ್ವಾಮೀಜಿ ಹೇಳಿದ್ದಾರೆ. ಸಿಎಂಗೆ ನಾವು ನಾಲ್ಕೈದು ಬಾರಿ ಕೇಳಿ ಕೊಂಡಿದ್ದೇವೆ. ಅವರೂ ಸಹ ನಮಗೆ ಟೈಂ ಕೊಡುತ್ತೇನೆ ಎಂದು ಹೇಳಿದ್ದಾರೆ. ಹಲವಾರು ಗದ್ದಲಗಳು ನಡೆದಿದ್ದರಿಂದ ಸಿಎಂ ನಮಗೆ ಟೈಂ ಕೊಡಲಾಗಿಲ್ಲ. ಇನ್ನೊಂದು ವಾರ ಬಿಟ್ಟು ಸ್ವಾಮೀಜಿಯವರನ್ನು ಸಿಎಂಗೆ ಭೇಟಿ ಮಾಡಿಸುತ್ತೇವೆ ಎಂದರು.


