ಬೆಂಗಳೂರು: ಜಾತಿನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದ ಮೇಲೆ ಬಂಧನವಾಗಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣ. ಆ ಧ್ವನಿ ಮುದ್ರಣ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ವನಿ ಮುದ್ರಣ ಶಾಸಕರದ್ದೇ ಎಂದು ಸಾಬೀತಾದ ಬಳಿಕ ಬಂಧಿಸಬೇಕಿತ್ತು. ಕಾನೂನಿಗೆ ಯಾರೂ ಅತೀರತರಲ್ಲ ಎಂದರು. ದೂರು ನೀಡಿದ ಕೂಡಲೇ ವಿಚಾರಣೆ ಮಾಡದೆ ನೋಟಿಸ್ ನೀಡದೆ ಬಂಧಿಸಲಾಗಿದೆ. ಇಲ್ಲಿ ಆತುರದ ಕ್ರಮವಾಗಿದ್ದು, ಏಕಾಏಕಿ ಬಂಧನವಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಲೀಡ್ ಬಂದಿರುವುದು ಕೂಡ ಇದಕ್ಕೆ ಕಾರಣ. ಧ್ವನಿ ಮುದ್ರಣವನ್ನು ಎಫ್ಎಸ್ಎಲ್ ಗೆ ಕಳುಹಿಸಿ, ತನಿಖೆ ಮಾಡಿ ಬಳಿಕ ಕ್ರಮ ಕೈಗೊಂಡಿದ್ದರೆ ನಾವ್ಯಾರೂ ಮಾತಾಡುತ್ತಿರಲಿಲ್ಲ. ಯಾವುದೇ ಪ್ರಕರಣದಲ್ಲಿ ಸತ್ಯವನ್ನು ಪರಿಶೀಲಿಸಬೇಕು ಎಂದರು.