ನವದೆಹಲಿ: ದೆಹಲಿಯ ಅಬಕಾರಿ ನೀತಿ (Delhi Excise Policy Scam) ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು, ಕವಿತಾ (K.Kavitha) ಅವರು ಸುಮಾರು ಐದು ತಿಂಗಳಿನಿಂದ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ (ED) ಅವರ ವಿರುದ್ಧ ತನಿಖೆ ಪೂರ್ಣಗೊಂಡಿದೆ ಎಂದು ತಿಳಿಸಿದೆ.

ಭ್ರಷ್ಟಾಚಾರ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದರೆ, ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ. ಕವಿತಾ ಅವರನ್ನು ಮಾ.15 ರಂದು ಹೈದರಾಬಾದ್‌ನಲ್ಲಿರುವ ಅವರ ನಿವಾಸದಿಂದ ಇಡಿ ಬಂಧಿಸಿತ್ತು. ಸಿಬಿಐ ಅಧಿಕಾರಿಗಳು ತಿಹಾರ್ ಜೈಲಿನಲ್ಲಿ ಬಂಧಿತರಾಗಿದ್ದಾಗ ಏ.11 ರಂದು ಕವಿತಾರನ್ನು ಬಂಧಿಸಿದ್ದರು
ಕವಿತಾ ನೇತೃತ್ವದ ‘ಸೌತ್ ಗ್ರೂಪ್’ ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷಕ್ಕೆ (AAP) ಕನಿಷ್ಠ 100 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಎಂದು ಸಿಬಿಐ ಮತ್ತು ಇಡಿ ಆರೋಪಿಸಿದ್ದವು.


