Thursday, November 20, 2025
24.6 C
Bengaluru
Google search engine
LIVE
ಮನೆಜಿಲ್ಲೆಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳನ್ನು ಸಂಕಷ್ಟಕ್ಕೆ ದೂಡದೆ ಕೂಡಲೇ ಬಾಕಿ ಹಣ ಪಾವತಿಸಿ: ಎಎಪಿ ಆಗ್ರಹ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳನ್ನು ಸಂಕಷ್ಟಕ್ಕೆ ದೂಡದೆ ಕೂಡಲೇ ಬಾಕಿ ಹಣ ಪಾವತಿಸಿ: ಎಎಪಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಸುಮಾರು 16 ಸಾವಿರಕ್ಕೂ ಅಧಿಕ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಿಂದಲೇ ವಂಚಿತರಾಗಿರುವುದು ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಇದಕ್ಕೆ ಜಿಎಸ್‌ಟಿಯ ತಾಂತ್ರಿಕ ಕಾರಣವನ್ನು ಕೊಡುತ್ತಿರುವುದು ಸಮಾಧಾನಕರ ಉತ್ತರವಲ್ಲ. ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲು ಖಜಾನೆಯಲ್ಲಿ ಹಣವಿಲ್ಲದಿರುವುದರಿಂದ ತಾಂತ್ರಿಕ ಕಾರಣಗಳನ್ನು ಕೊಟ್ಟುಕೊಂಡು ದಿನದೂಡಲಾಗುತ್ತಿದೆ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡುವಂತಾಗಿದೆ. ಇಂತಹ ಆರೋಪಗಳಿಗೆ ಎಡೆಮಾಡಿಕೊಡದೆ ತಕ್ಷಣ ಫಲಾನುಭವಿಗಳಿಗೆ ಬರಬೇಕಿರುವ ಬಾಕಿ ಕಂತಿನ ಹಣವನ್ನು ಬಿಡುಗಡೆ ಮಾಡಬೇಕು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಚಂದ್ರು, ಆದಾಯ ತೆರಿಗೆ ಇಲಾಖೆ ಹಾಗೂ ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ತುರ್ತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ಕೊಡಬೇಕು. ಫಲಾನುಭವಿಗಳ ಪೈಕಿ ಕೆಲವರು ಪತಿ ಮತ್ತು ಮಕ್ಕಳ ದೆಸೆಯಿಂದ ಮನೆ ಯಜಮಾನಿ ಫಲಾನುಭವಿ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. ಹಾಗಾಗಿ ನಿಜವಾದ ಜಿಎಸ್‌ಟಿದಾರರು ಯಾರು ಎಂಬುದನ್ನು ಪತ್ತೆ ಹಚ್ಚಿ ಸಮಸ್ಯೆ ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಎಂದು ಒತ್ತಾಯಿಸಿದ್ದಾರೆ.

ಯೋಜನೆಗೆ ಅರ್ಹರಿದ್ದರೂ, ಅನರ್ಹತೆ ಪಟ್ಟಿಯಲ್ಲಿ ಇರುವವರ ಸಂಖ್ಯೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲೇ ಅಧಿಕವಾಗಿದೆ. ಅವುಗಳು ರಾಜ್ಯದಲ್ಲಿ ಅತಿಹೆಚ್ಚು ಬಡವರಿರುವ ಜಿಲ್ಲೆಗಳಾಗಿವೆ. ಆಸ್ಪತ್ರೆ ಖರ್ಚಿಗೆ, ದೈನಂದಿನ ಸಾಂಸಾರಿಕ ಖರ್ಚಿಗೆ, ಮಕ್ಕಳ ಕಲಿಕಾ ಸಾಮಗ್ರಿ-ಬಟ್ಟೆಬರೆಗಳ ಖರ್ಚಿಗೆ ಗೃಹಲಕ್ಷ್ಮಿ ಹಣದ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಲಕ್ಷಾಂತರ ಮಹಿಳೆಯರಿಗೆ ನಷ್ಟವಾಗಬಾರದು. ಆರ್ಥಿಕವಾಗಿ ಸಮಾಧಾನಕರ ಬದುಕು ಕಟ್ಟಿಕೊಳ್ಳುವಂತಾಗಬೇಕು. ರಾಜ್ಯ ಸರ್ಕಾರ ತಕ್ಷಣ ದೋಷಗಳನ್ನು ಸರಿಪಡಿಸಿ ಹಣವನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ವಿಶ್ವಾಸವಿಟ್ಟು 136 ಸೀಟುಗಳನ್ನು ಕರುಣಿಸಿದ್ದಾರೆ. ಅಂತಹ ತಾಯಂದಿರಿಗೆ ಅನ್ಯಾಯ ಮಾಡುವುದು ಉಚಿತವಲ್ಲ. ಅವರ ಶಾಪಕ್ಕೆ ಒಳಗಾಗದೆ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ತಡಮಾಡದೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಾಕಿ ಹಣ ಪಾವತಿಸಬೇಕು. ಇಲ್ಲದಿದ್ದರೆ ರಾಜ್ಯದ ಮಹಿಳೆಯರನ್ನು ಒಟ್ಟುಗೂಡಿಸಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಪತ್ರದ ಮುಖೇನ ರವಾನಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments