ಅಕ್ಟೋಬರ್ 3 ರಿಂದ ಶುರುವಾಗಲಿರುವ ಮಹಿಳಾ ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ಗಳಾಗಿ ರಿಚಾ ಘೋಷ್ ಹಾಗೂ ಯಾಸ್ತಿಕಾ ಭಾಟಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಈ ತಂಡದಲ್ಲಿ ಕರ್ನಾಟಕದ ಯುವ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಸ್ಥಾನ ಪಡೆದಿದ್ದು, ಅದಕ್ಕೂ ಮುನ್ನ ಅವರು ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ. ಕಳೆದ ಏಷ್ಯಾಕಪ್ ಟೂರ್ನಿಯ ವೇಳೆ ಶ್ರೇಯಾಂಕಾ ಗಾಯಗೊಂಡಿದ್ದರು. ಇದಾದ ಬಳಿಕ ಅವರು ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಲಾಗಿದೆ.
ಹಾಗೆಯೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಯಾಸ್ತಿಕಾ ಭಾಟಿಯಾ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರ ಸಹ ಫಿಟ್ನೆಸ್ ಟೆಸ್ಟ್ಗೆ ಒಳಗಾಗಬೇಕಿದೆ. ಇನ್ನು ಈ ತಂಡದಲ್ಲಿ ವೇಗಿಗಳಾಗಿ ಪೂಜಾ ವಸ್ತ್ರಾಕರ್ ಹಾಗೂ ರೇಣುಕಾ ಸಿಂಗ್ ಠಾಕೂರ್ ಸ್ಥಾನ ಪಡೆದಿದ್ದು, ಸ್ಪಿನ್ನರ್ಗಳಾಗಿ ರಾಧಾ ಯಾದವ್ ಮತ್ತು ಆಶಾ ಸೋಭಾನ ಕಾಣಿಸಿಕೊಂಡಿದ್ದಾರೆ.
ತಂಡದಲ್ಲಿ ಆಲ್ರೌಂಡರ್ ಹಿರಿಯ ಆಲ್ರೌಂಡರ್ ದೀಪ್ತಿ ಶರ್ಮಾ ಸ್ಥಾನ ಪಡೆದರೆ, ಪ್ರಮುಖ ಬ್ಯಾಟರ್ಗಳಾಗಿ ಶಫಾಲಿ ವರ್ಮಾ ಹಾಗೂ ಜೆಮಿಮಾ ರೊಡ್ರಿಗಸ್ ಆಯ್ಕೆಯಾಗಿದ್ದಾರೆ. ಅದರಂತೆ ಟಿ20 ವಿಶ್ವಕಪ್ಗೆ ಭಾರತ ಮಹಿಳಾ ತಂಡ ಈ ಕೆಳಗಿನಂತಿದೆ…
ಭಾರತ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ , ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಸೋಭಾನ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್*, ಸಜನಾ ಸಜೀವನ್.
ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ, ತನುಜಾ ಕನ್ವರ್ ಮತ್ತು ಸೈಮಾ ಠಾಕೂರ್.