ಬೆಂಗಳೂರು: ಲೇಡಿಸ್ ಪಿಜಿಗೆ ನುಗ್ಗಿ ಯುವಕನೋರ್ವ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಇದು ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್‌ನಲ್ಲಿ ನಡೆದಿದೆ.
ಕೃತಿ ಕುಮಾರಿ (24) ಮೃತ ಯುವತಿ. ಈಕೆ ಬಿಹಾರ ಮೂಲದವಳಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ರಾತ್ರಿ 11:30ರ ವೇಳೆಗೆ ಘಟನೆ ನಡೆದಿದೆ. ರಾತ್ರಿ 11:10ರ ವೇಳೆಗೆ ಯುವಕ ಚಾಕು ಸಮೇತ ಪಿಜಿಯೊಳಗೆ ಬಂದಿದ್ದಾನೆ. ಮೂರನೇ ಮಹಡಿಯಲ್ಲಿರುವ ರೂಂ ಬಳಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಆರೋಪಿ ಯುವಕನ ಪತ್ತೆ ಕಾರ್ಯ ನಡೆಯುತ್ತಿದೆ. ಪಿಜಿ ಮಾಲೀಕರ ನಿರ್ಲಕ್ಷ್ಯವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


