ನವದೆಹಲಿ : ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿರುವ ಎಸ್ಬಿಐ ಷೇರು ಮಾರುಕಟ್ಟೆಯಲ್ಲೂ ದೈತ್ಯನಾಗಿದೆ. ಅದರ ಷೇರು ಸಂಪತ್ತು ಅಥವಾ ಮಾರುಕಟ್ಟೆ ಬಂಡವಾಳ ಹೊಸ ಮೈಲಿಗಲ್ಲು ಮುಟ್ಟಿದೆ. ಇವತ್ತು ಷೇರು ಮಾರುಕಟ್ಟೆ ಭರ್ಜರಿಯಾಗಿ ಉಬ್ಬಿದ್ದು, ಇದರೊಟ್ಟಿಗೆ ಎಸ್ಬಿಐ ಷೇರುಗಳೂ ಕೂಡ ಸಖತ್ ಬೆಲೆ ಹೆಚ್ಚಿಸಿಕೊಂಡಿವೆ. ಇದರ ಫಲವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಬಂಡವಾಳ ಎಂಟು ಲಕ್ಷ ಕೋಟಿ ರೂ ಗಡಿ ದಾಟಿದೆ. ಇವತ್ತು ಸೋಮವಾರ ಎಸ್ಬಿಐ ಷೇರುಬೆಲೆ ಶೇ. 9.48ರಷ್ಟು ಹೆಚ್ಚಳ ಕಂಡು 909.05 ರೂ ಮುಟ್ಟಿದೆ. ಒಟ್ಟು ಮಾರ್ಕೆಟ್ ಕ್ಯಾಪ್ 8.07 ಲಕ್ಷ ಕೋಟಿ ರೂ ಆಗಿದೆ.
ಎಕ್ಸಿಟ್ ಪೋಲ್ಗಳು ಎನ್ಡಿಎ ಗೆಲುವನ್ನು ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಹರ್ಷಗೊಂಡಂತಿದೆ. ಅದರಲ್ಲೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರಿಗೆ ಬೇಡಿಕೆ ಹೆಚ್ಚಿದೆ. ಎನ್ಡಿಎ ಆಡಳಿತದ ಅವಧಿಯಲ್ಲಿ ಸರ್ಕಾರಿ ಉದ್ದಿಮೆಗಳ ಪರಿಸ್ಥಿತಿ ಉತ್ತಮಗೊಂಡಿರುವುದು ಈ ಭಾವೋತ್ಕರ್ಷಕ್ಕೆ ಕಾರಣವಾಗಿದೆ.
ಎಸ್ಬಿಐಗಿಂತ ಮುಂಚೆ ಆರು ಕಂಪನಿಗಳು ಮಾರುಕಟ್ಟೆ ಬಂಡವಾಳದಲ್ಲಿ ಎಂಟು ಲಕ್ಷ ಕೋಟಿ ರೂ ನ ಮೈಲಿಗಲ್ಲು ಮುಟ್ಟಿವೆ.
- ರಿಲಾಯನ್ಸ್ ಇಂಡಸ್ಟ್ರೀಸ್: 20.45 ಲಕ್ಷ ಕೋಟಿ ರೂ
- ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್: 13.42 ಲಕ್ಷ ಕೋಟಿ ರೂ
- ಎಚ್ಡಿಎಫ್ಸಿ ಬ್ಯಾಂಕ್: 11.96 ಲಕ್ಷ ಕೋಟಿ ರೂ
- ಭಾರ್ತಿ ಏರ್ಟೆಲ್: 8.30 ಲಕ್ಷ ಕೋಟಿ ರೂ
- ಇನ್ಫೋಸಿಸ್: 5.82 ಲಕ್ಷ ಕೋಟಿ ರೂ
- ಐಸಿಐಸಿಐ ಬ್ಯಾಂಕ್: 8.17 ಲಕ್ಷ ಕೋಟಿ ರೂ
ಈ ಪೈಕಿ ಇನ್ಫೋಸಿಸ್ ಸಂಸ್ಥೆ ಈ ಮೇಲಿನ ಮಟ್ಟವನ್ನು ಕಾಯ್ದುಕೊಳ್ಳಲು ಆಗಿಲ್ಲ. ಅದರ ಮಾರುಕಟ್ಟೆ ಬಂಡವಾಳ 5.82 ಲಕ್ಷ ಕೋಟಿ ರೂಗೆ ಕುಸಿದಿದೆ. ಇದರೊಂದಿಗೆ ಮಾರ್ಕೆಟ್ ಕ್ಯಾಪ್ನಲ್ಲಿ ಎಸ್ಬಿಐ ಭಾರತದ ಆರನೇ ಅತಿದೊಡ್ಡ ಕಂಪನಿ ಎನಿಸಿದೆ. ರಿಲಾಯನ್ಸ್ ಸದ್ಯ ಭಾರತದಲ್ಲಿ ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವ ಕಂಪನಿಯಾಗಿದೆ.
ಭಾರತದಲ್ಲಿ ಭವಿಷ್ಯದಲ್ಲಿ ಇನ್ಫ್ರಾಸ್ಟ್ರಕ್ಚರ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳು ಬಲಿಷ್ಠವಾಗಿ ಬೆಳೆಯುವ ನಿರೀಕ್ಷೆ ಇದೆ. ಈ ಎರಡು ವಲಯಗಳಿಗೆ ಬಂಡವಾಳ ವೆಚ್ಚ ಬಹಳ ಅಗತ್ಯ. ಹೀಗಾಗಿ ಬ್ಯಾಂಕುಗಳಿಗೆ ಬೇಡಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಅದರಲ್ಲೂ ಪ್ರಮುಖವಾಗಿ ಎಸ್ಬಿಐ ಇತ್ಯಾದಿ ಪಿಎಸ್ಯು ಬ್ಯಾಂಕುಗಳ ಷೇರುಗಳು ಒಳ್ಳೆಯ ಬೇಡಿಕೆ ಪಡೆಯುವ ನಿರೀಕ್ಷೆ ಇದೆ.