ಬೆಂಗಳೂರು: ನಿಮ್ಮಲ್ಲಿರುವ ಮನಸ್ಥಿತಿ ಬದಲಿಸಿಕೊಂಡು ಈ ಬಾರಿಯ ಲೋಕಸಭಾ ಚುಣಾವಣೆಯಲ್ಲಿ ತಪ್ಪದೆ ಮತದಾನ ಮಾಡಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಗಾಂಧಿನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂದು ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಮ್ಮ ಆಕಾಂಕ್ಷೆಗಳು ಹೀಡೇರಬೇಕದರೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನೀವು ತಪ್ಪದೆ ಮತಟ್ಟೆಗಳಿಗೆ ತೆರಳಿ ಮತ ಚಲಾಯಿಸಬೇಕೆಂದು ತಿಳಿಸಿದರು.
ನಮ್ಮ ದೇಶದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಿದ್ದು, ಎಲ್ಲರೂ ಸ್ವಯಂಪ್ರೇರಿತವಾಗಿ ಮತ ಚಲಾಯಿಸಬೇಕು. ಚುನಾವಣೆಯಲ್ಲಿ ಒಂದು ಮತವು ಕೂಡಾ ಮುಖ್ಯವಾಗಿದ್ದು, ಆ ಒಂದು ಮತಕ್ಕೆ ಪ್ರಾಮುಖ್ಯತೆ ನೀಡಿ ಮತದಾನ ಮಾಡಬೇಕೆಂದು ಹೇಳಿದರು.
ಏಪ್ರಿಲ್ 26 ರಂದು ನಡೆಯುವ ಮತದಾನದ ದಿನ ಎಲ್ಲರ ಮೊದಲ ಆದ್ಯತೆ ಮತದಾನ ಮಾಡುವುದಾಗಿರಬೇಕು. ನಿಮ್ಮ ಒಂದು ಮತದ ಶಕ್ತಿಯನ್ನು ಅರಿತು ಮತದಾನ ಮಾಡಿದ ನಂತರ ನೀವುಗಳು ಪ್ರವಾಸ, ಸಿನಿಮಾ ಸೇರಿದಂತೆ ಬೇರೆ ಕಡೆ ಹೋಗಲು ಯೋಜನೆಗಳನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಪಶ್ವಿಮ ವಲಯ ಆಯುಕ್ತರಾದ ಡಾ. ಆರ್.ಎಲ್. ದೀಪಕ್, ಚುನಾವಣಾ ರಾಯಭಾರಿಯಾದ ನೀತು ವನಜಾಕ್ಷಿ, ಪಶ್ಚಿಮ ವಲಯ ಜಂಟಿ ಆಯುಕ್ತರಾದ ಯೋಗೇಶ್, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿಯಾದ ರಮಾಮಣಿ, ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲರಾದ ಡಾ. ಬಿ.ಜಿ ಭಾಸ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


