Wednesday, April 30, 2025
34.5 C
Bengaluru
LIVE
ಮನೆ#Exclusive NewsTop Newsಐಫೋನ್‌ ಮಾರಾಟದಲ್ಲಿ ಭಾರೀ ಕುಸಿತ, ಆಪಲ್‌ನ್ನು ಹಿಂದಿಕ್ಕಿದ ಸ್ಯಾಮ್ಸಂಗ್‌!

ಐಫೋನ್‌ ಮಾರಾಟದಲ್ಲಿ ಭಾರೀ ಕುಸಿತ, ಆಪಲ್‌ನ್ನು ಹಿಂದಿಕ್ಕಿದ ಸ್ಯಾಮ್ಸಂಗ್‌!

ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಐಫೋನ್‌ ತಯಾರಕ ಆಪಲ್‌ನ್ನು ಹಿಂದಿಕ್ಕಿದೆ. ಈ ಮೂಲಕ 2024ರ ಮೊದಲ ತ್ರೈಮಾಸಿಕದಲ್ಲಿ ಅಗ್ರ ಸ್ಮಾರ್ಟ್‌ಫೋನ್ ಪೂರೈಕೆದಾರ ಕಂಪನಿಯಾಗಿ ಮೂಡಿ ಬಂದಿದೆ. ಇದೇ ವೇಳೆ ಚೀನಾದ ಕಂಪನಿಗಳು ತಮ್ಮ ಮಾರುಕಟ್ಟೆಯನ್ನು ದೊಡ್ಡ ಮಟ್ಟಕ್ಕೆ ಹೆಚ್ಚಿಸಿಕೊಂಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಪಾಲನ್ನು ಬಾಚಿಕೊಂಡಿವೆ ಎಂದು ಸಂಶೋಧನಾ ಸಂಸ್ಥೆ ಇಂಟರ್‌ನ್ಯಾಷನಲ್ ಡಾಟಾ ಕಾರ್ಪೊರೇಷನ್‌ (ಐಡಿಸಿ) ಹೇಳಿದೆ.
ಆಪಲ್ ಸ್ಮಾರ್ಟ್‌ಫೋನ್‌ಗಳ ಜಾಗತಿಕ ಸಾಗಣೆಗಳು ತ್ರೈಮಾಸಿಕದಲ್ಲಿ ಶೇ. 9.6ರಷ್ಟು ಕುಸಿತ ಕಂಡಿದ್ದು, 5.01 ಕೋಟಿಗೆ ಇಳಿಕೆಯಾಗಿದೆ ಎಂದು ಐಡಿಸಿ ತಿಳಿಸಿದೆ. ಇದೇ ವೇಳೆ ಸ್ಯಾಮ್‌ಸಂಗ್‌ನ ಸಾಗಣೆಗಳು ಶೇ. 0.7ರಷ್ಟು ಅಲ್ಪ ಕುಸಿತ ಕಂಡಿದ್ದು 6.01 ಕೋಟಿ ಯೂನಿಟ್‌ಗಳಿಗೆ ತಲುಪಿದೆ. ಆದರೆ, ಅಲ್ಪ ಕುಸಿತದೊಂದಿಗೆ ಜಾಗತಿಕ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿದೆ.

ಇನ್ನು ಒಟ್ಟು ಸ್ಮಾರ್ಟ್‌ಫೋನ್ ಸಾಗಣೆಗಳು ಸತತ ಮೂರನೇ ತ್ರೈಮಾಸಿಕದಲ್ಲೂ ಏರಿಕೆ ಕಂಡಿವೆ. ಸ್ಮಾರ್ಟ್‌ಫೋನ್‌ ಮಾರಾಟ ಶೇ. 7.8ರಷ್ಟು ಹೆಚ್ಚಾಗಿದ್ದು 28.94 ಕೋಟಿ ಯುನಿಟ್‌ಗಳಿಗೆ ತಲುಪಿದೆ ಎಂದು ಐಡಿಸಿ ಹೇಳಿದೆ. ಆಪಲ್‌ನ ಮಾರುಕಟ್ಟೆ ಪಾಲು ಒಂದು ವರ್ಷದ ಹಿಂದೆ ಇದ್ದ ಶೇ. 20.7ರಿಂದ ಶೇ. 17.3ಕ್ಕೆ ಕುಸಿದಿದೆ. ಇದೇ ವೇಳೆ ಚೀನಾದ ಕಂಪನಿಗಳಾದ ಶವೋಮಿ ಹಾಗೂ ಟ್ರಾನ್‌ಷನ್‌ಗಳ ಅಬ್ಬರದ ಮಧ್ಯೆ ಸ್ಯಾಮ್ಸಂಗ್‌ನ ಪಾಲು ಶೇ. 22.5ರಿಂದ ಶೇ. 20.8ಕ್ಕೆ ಇಳಿಕೆಯಾಗಿದೆ.

ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಸಾಗಣೆದಾರ ಕಂಪನಿಯಾಗಿ ಶವೋಮಿ ಗುರುತಿಸಿಕೊಂಡಿದೆ. ಚೀನಾ ಕಂಪನಿಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 34ರಷ್ಟು ಏರಿಕೆಯಾಗಿದ್ದು 4.08 ಕೋಟಿಗೆ ತಲುಪಿದೆ. ಇದೇ ವೇಳೆ ಚೀನಾದ ಇನ್ನೊಂದು ಕಂಪನಿ ಟ್ರಾನ್ಸ್‌ಷನ್ ಸಾಗಣೆಗಳು ಬರೋಬ್ಬರಿ ಶೇ. 85ರಷ್ಟು ರಷ್ಟು ಜಿಗಿದಿದ್ದು 2.85 ಕೋಟಿಗೆ ತಲುಪಿದೆ. ಒಪ್ಪೋ ಮೊದಲ ತ್ರೈಮಾಸಿಕದಲ್ಲಿ ವಿವೋ ಅನ್ನು ಹಿಂದಿಕ್ಕಿದ್ದು ಐದನೇ ಸ್ಥಾನಕ್ಕೆ ಜಿಗಿದಿದೆ.

ಸವಾಲಿನ ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಚೇತರಿಕೆಯು ಉತ್ತಮವಾಗಿ ನಡೆಯುತ್ತಿದೆ ಎಂದು ಒಟ್ಟಾರೆ ಬೆಳವಣಿಗೆಯು ತೋರಿಸಿದೆ ಎಂದು ಐಡಿಸಿಯು ಹೇಳಿದೆ. ಗ್ರಾಹಕರು ಸುದೀರ್ಘ ಅವಧಿಗಾಗಿ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಿದ್ದು, ಹೆಚ್ಚಿನ ಬೆಲೆಗಳ ಫೋನ್‌ಗಳ ಮಾರಾಟ ಹೆಚ್ಚುತ್ತಿದೆ.

2023ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಸಾಗಣೆಯಲ್ಲಿ ಆಪಲ್‌ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು. ಇದಾಗಿ ಕೆಲವೇ ತಿಂಗಳಲ್ಲಿ ಈ ಸ್ಥಾನವನ್ನು ಕಳೆದುಕೊಂಡಿದೆ. ಪ್ರೀಮಿಯಂ ಸಾಧನಗಳ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಕಂಪನಿಯ ಆಕ್ರಮಣಕಾರಿ ವ್ಯಾಪಾರಿ ಕೊಡುಗೆಗಳು ಮತ್ತು ಬಡ್ಡಿ-ಮುಕ್ತ ಹಣಕಾಸು ಯೋಜನೆಗಳಿಂದಾಗಿ ಈ ಏರಿಕೆ ಕಂಡಿತ್ತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments