ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ ಉದ್ಘಾಟನೆಯಾಗಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ದು, ಉದ್ಘಾಟನೆಯಾಗಿ ಒಂದು ತಿಂಗಳಾದರೂ ನಿತ್ಯ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿಲ್ಲ. ರಾಮಮಂದಿರ ಉದ್ಘಾಟನೆಯಾದ 30 ದಿನಗಳಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ರಾಮನ ದರ್ಶನ ಪಡೆದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅಯೋಧ್ಯೆಯ ತುಂಬ ರಾಮನ ಭಕ್ತರೇ ತುಂಬಿಕೊಂಡಿದ್ದಾರೆ. ರಾಮಮಂದಿರ ಉದ್ಘಾಟನೆಯಾದ ಬಳಿಕ ನಿತ್ಯ ಒಂದು ಲಕ್ಷಕ್ಕೂ ಅಧಿಕ ಭಕ್ತರು ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ರಾಮಮಂದಿರ ದರ್ಶನಕ್ಕೆ ಮಾರುದ್ದದ ಸಾಲು ಇದ್ದರೂ ದಿನೇದಿನೆ ಭಕ್ತರ ಆಗಮನವು ಜಾಸ್ತಿಯಾಗುತ್ತಿದೆ. ಹಾಗಾಗಿ, ಭಕ್ತರು ಸುಗಮವಾಗಿ ರಾಮನ ದರ್ಶನ ಪಡೆಯಲು ಸಕಲ ವ್ಯವಸ್ಥೆ ಮಾಡಲಾಗಿದೆ. ಮೊದಲಿದ್ದ ನೂಕುನುಗ್ಗಲು ಈಗ ಇಲ್ಲ ಎಂದು ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಕಾರಣ ನಿರೀಕ್ಷೆಯಂತೆಯೇ ವ್ಯಾಪಾರ-ವಹಿವಾಟು ಹತ್ತಾರು ಪಟ್ಟು ಜಾಸ್ತಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಕಾರಣ ಕೋಟ್ಯಂತರ ರೂ. ದೇಣಿಗೆ ಕೂಡ ಸಂಗ್ರಹವಾಗಿದೆ. ರಾಮಮಂದಿರ ಉದ್ಘಾಟನೆಯಾದ ಮೊದಲ 11 ದಿನಗಳಲ್ಲಿ 25 ಲಕ್ಷ ಜನ ಭೇಟಿ ನೀಡಿದ್ದರು. ಆಗ 25 ಕೋಟಿ ರೂ. ದೇಣಿಗೆ ಸಂಗ್ರಹವಾಗಿತ್ತು. ರಾಮನ ಭಕ್ತರು ಸುಲಭವಾಗಿ ಕಾಣಿಕೆ ಸಲ್ಲಿಸಲಿ ಎಂದು ರಾಮಮಂದಿರ ಆವರಣದಲ್ಲಿ ಸುಮಾರು 10 ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಆನ್‌ಲೈನ್ ಮೂಲಕವೂ ಭಕ್ತರು ದೇಣಿಗೆ ಸಲ್ಲಿಸಬಹುದಾಗಿದೆ. ಇದರ ಮಧ್ಯೆಯೇ ರಾಮಮಂದಿರ ನಿರ್ಮಾಣದ ಎರಡನೇ ಹಂತದ ಕಾಮಗಾರಿ ಕೂಡ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆಯನ್ನು ಜಾಗತಿಕ ಆಧ್ಯಾತ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಇದರ ಭಾಗವಾಗಿ ಕನಿಷ್ಠ 13 ಹೊಸ ದೇವಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಆರು ಬೃಹತ್ ದೇವಾಲಯದ ಸಂಕೀರ್ಣದ ಒಳಗೆ ಮತ್ತು ಏಳು ಹೊರಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗುರುದೇವ್ ಗಿರಿಜಿ ಮಾಹಿತಿ ನೀಡಿದ್ದು, ಮುಖ್ಯ ದೇವಾಲಯವನ್ನು ಪೂರ್ಣಗೊಳಿಸುವ ಕಾಮಗಾರಿ ಸೇರಿದಂತೆ ಎಲ್ಲ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.