Thursday, January 29, 2026
20.3 C
Bengaluru
Google search engine
LIVE
ಮನೆ#Exclusive Newsಕಾಶ್ಮೀರದಲ್ಲಿ ಉಗ್ರರ ದಾಳಿಗೆ 7 ಜನ ವಲಸಿಗ ಕಾರ್ಮಿಕರ ಬಲಿ!

ಕಾಶ್ಮೀರದಲ್ಲಿ ಉಗ್ರರ ದಾಳಿಗೆ 7 ಜನ ವಲಸಿಗ ಕಾರ್ಮಿಕರ ಬಲಿ!

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಗಂದರ್‌ಬಾಲ್ ಜಿಲ್ಲೆಯ ಶ್ರೀನಾಗಾ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ ಸಂಜೆ ಉಗ್ರರು ದಾಳಿ ನಡೆಸಿದ್ದು, ವೈದ್ಯರು ಸೇರಿದಂತೆ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ದಾಳಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ಉಳಿದ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಸಂಜೆ ಕಾರ್ಮಿಕರು ಕೆಲಸ ಮುಗಿಸಿ ಗುಂಡ್‌ನಲ್ಲಿರುವ ತಮ್ಮ ಶಿಬಿರಕ್ಕೆ ಮರಳುತ್ತಿದ್ದಾಗ ದಾಳಿ ನಡೆದಿದೆ.

ಉಗ್ರರ ದಾಳಿಗೆ ಬುದ್ಗಾಮ್ ಜಿಲ್ಲೆಯ ಡಾಕ್ಟರ್ ಶಹನವಾಜ್ ಮತ್ತು ಇತರ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ಫಹೀಮ್ ನಜೀರ್, ಕಲೀಂ, ಮೊಹಮ್ಮದ್ ಹನೀಫ್ ಹಾಗೇ ಜಮ್ಮುವಿನ ಶಶಿ ಅಬ್ರೋಲ್, ಮಧ್ಯಪ್ರದೇಶದ ಅನಿಲ್ ಶುಕ್ಲಾ, ಪಂಜಾಬ್‌ನ ಗುರ್ಮೀತ್ ಸಿಂಗ್ ಮೃತ ಕಾರ್ಮಿಕರು.

ಪ್ರಾಥಮಿಕ ವರದಿ ಪ್ರಕಾರ, ‘ಇಬ್ಬರು ಭಯೋತ್ಪಾದಕರು ಕಾರ್ಮಿಕರ ಗುಂಪನ್ನು ಗುರಿಯಾಗಿಸಿಕೊಂಡ ಪರಿಣಾಮವಾಗಿ ಇಬ್ಬರು ಕಾರ್ಮಿಕರು ತಕ್ಷಣವೇ ಸಾವನ್ನಪ್ಪಿದ್ದಾರೆ. ನಂತರ ವೈದ್ಯರೊಂದಿಗೆ ಇತರ ನಾಲ್ವರು ಗಾಯಗೊಂಡಿದ್ದಾರೆ’. ದಾಳಿಯಲ್ಲಿ ಗಾಯಗೊಂಡ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಠಿಣ ಕ್ರಮಕ್ಕೆ ಕರೆ ನೀಡಿದ ಅಮಿತ್ ಶಾ: ಘಟನೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಇದು ಹೇಡಿತನದ ಹೇಯ ಕೃತ್ಯವಾಗಿದೆ. ಈ ಹೇಯ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಿಡಲಾಗುವುದಿಲ್ಲ ಮತ್ತು ನಮ್ಮ ಭದ್ರತಾ ಪಡೆಗಳಿಂದ ಕಠಿಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ. ಅಪಾರ ದುಃಖದ ಈ ಕ್ಷಣದಲ್ಲಿ, ಮೃತರ ಕುಟುಂಬಗಳಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಹಿಂಸಾಚಾರದ ವಿರುದ್ಧ ಇಡೀ ದೇಶ ಒಗ್ಗಟ್ಟು’-ಪ್ರಿಯಾಂಕಾ ಗಾಂಧಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಹತ್ಯೆಯನ್ನು ಖಂಡಿಸಿದ್ದು, “ಅಮಾಯಕ ನಾಗರಿಕರನ್ನು ಗುರಿಯಾಗಿಸುವುದು ಮಾನವೀಯತೆಯ ವಿರುದ್ಧದ ಅಪರಾಧ. ಇಂತಹ ಹಿಂಸಾಚಾರದ ವಿರುದ್ಧ ಇಡೀ ದೇಶವು ಒಗ್ಗಟ್ಟಾಗಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸಿಎಂ ಸಂತಾಪ, ತಾರಿಕ್ ಹಮೀದ್ ಕಳವಳ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಿಂಸಾಚಾರವನ್ನು ಖಂಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಾಜದ್ ಗನಿ ಲೋನ್ ಅವರು ದಾಳಿಯನ್ನು ಹುಚ್ಚುತನದ ಕೃತ್ಯ ಎಂದು ಬಣ್ಣಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಇಂತಹ ಘಟನೆಗಳು ಪ್ರದೇಶವನ್ನು ಮತ್ತಷ್ಟು ಅಸ್ಥಿರಗೊಳಿಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸದ್ಯ ದಾಳಿ ನಡೆದ ಘಟನಾ ಸ್ಥಳದ ಸುತ್ತಲೂ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ ಮತ್ತು ದಾಳಿಕೋರರ ಪತ್ತೆಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments