ನವದೆಹಲಿ: ವಿವಿಧ ಕಾರಣಗಳಿಂದ ವಿದೇಶಗಳಿಗೆ ಒಯ್ಯಲ್ಪಟ್ಟಿದ್ದ 640 ಪುರಾತನ ಕಲಾಕೃತಿಗಳನ್ನು ವಾಪಸ್ ತರಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ನೀಡಿರುವ ಇಲಾಖೆ, ವಿದೇಶಗಳಿಂದ ವಾಪಸ್ ತಂದಿರುವ ಕಲಾಕೃತಿಗಳ ಪೈಕಿ ಅತಿಹೆಚ್ಚು ಅಮೆರಿಕದಿಂದಲೇ ತರಲಾಗಿದೆ ಎಂದು ಇಲಾಖೆ ತಿಳಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ವಿವಿಧ ಕಾರಣಗಳಿಂದ ಅಮೆರಿಕ ಸೇರಿದ್ದ ಭಾರತದ ರಾಷ್ಟ್ರೀಯ ಪರಂಪರೆಯ ಕಲಾಕೃತಿಗಳನ್ನು ವಾಪಸ್ ತರುವ ಬಗ್ಗೆಯೂ ಸಮಾಲೋಚನೆಗಳನ್ನು ನಡೆಸಿದ್ದರು. ಪ್ರಧಾನಿಯವರ ಮೂರು ದಿನಗಳ ಅಮೇರಿಕ ಭೇಟಿ ಸಂದರ್ಭದಲ್ಲೇ ಭಾರತಕ್ಕೆ 297 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ಈಗ ಪುರಾತತ್ವ ಇಲಾಖೆ ಹೇಳಿರುವ 640 ಪುರಾತನ ಕಲಾಕೃತಿಗಳಲ್ಲಿ ಅವೂ ಸಹ ಸೇರಿವೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2014 ರಿಂದ ಭಾರತವು 640 ಪ್ರಾಚೀನ ವಸ್ತುಗಳನ್ನು ಯಶಸ್ವಿಯಾಗಿ ಮರುಪಡೆದುಕೊಂಡಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ.