ಬೆಂಗಳೂರು: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಚುನಾವಣಾ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸಿ ಮೊದಲ ಬಾರಿಗೆ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ವಿರುದ್ಧ ಸೋಲು ಅನುಭವಿಸಿದ್ದರು. ಬಳಿಕ 2023ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಕಾಂಗ್ರೆಸ್ಸಿನ ಇಕ್ಬಾಲ್ ಹುಸೇನ್ ವಿರುದ್ದ ಸೋಲುಂಡರು. ಇದೀಗ ಮೂರನೇ ಬಾರಿ ಬಿಜೆಪಿ ಮೈತ್ರಿಯೊಂದಿಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಅಖಾಡಕ್ಕೆ ಧುಮುಕುತ್ತಿದ್ದಾರೆ. ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ರಾಮನಗರ, ಚನ್ನಪಟ್ಟಣ ಮತ್ತು ಮಂಡ್ಯ ಮೂರು ಕ್ಷೇತ್ರಗಳೂ ಅಕ್ಕಪಕ್ಕದ ಕ್ಷೇತ್ರಗಳಾಗಿವೆ. ಆದರೆ, ಎರಡು ಬಾರಿ ಸೋಲನುಭವಿಸಿದ್ದು, ಮೂರನೇ ಬಾರಿ ಗೆಲುವಿನ ನಿರೀಕ್ಷೆ ಹೊಂದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕಣಕ್ಕಿಳಿದಿದ್ದಾಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆಗ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳಲು ಕುಮಾರಸ್ವಾಮಿ ವಿಫಲರಾಗಿದ್ದರು. ಇದೀಗ ಕೇಂದ್ರ ಸಚಿವರಾಗಿದ್ದಾರೆ. ಅಲ್ಲದೇ, ತಾವು ಗೆದ್ದ ಕ್ಷೇತ್ರದಿಂದಲೇ ಮಗನನ್ನು ಕಣಕ್ಕಿಳಿಸಿದ್ದು, ಗೆಲ್ಲಿಸಿಕೊಂಡು ಬರಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
3 ನೇ ಬಾರಿಯಾದ್ರು ಗೆಲ್ತಾರಾ ನಿಖಿಲ್ ಕುಮಾರಸ್ವಾಮಿ
RELATED ARTICLES