ಬೆಂಗಳೂರು; ಬಿರ್ಸಾಮುಂಡಾ ಜಯಂತಿ ಆಚರಣೆಗೆ ಸಚಿವರ ಬಾಡಿ ಗಾರ್ಡ್ ಗಳು, ಡ್ರೈವರ್ ಗಳು, ಗನ್ ಮ್ಯಾನ್ ಹಾಗೂ ಪಿಎಗಳು ಸೇರಿ 30 ಸಾವಿರ ರೂ. ದಿನ ಭತ್ಯೆ ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಭಾರತ ಸರ್ಕಾರದ ಸೂಚನೆಯಂತೆ ನವೆಂಬರ್ 15 ರಂದು ಚಾಮರಾಜನಗರದಲ್ಲಿ ಬಿರ್ಸಾಮುಂಡಾ ಜಯಂತಿ ಮತ್ತು ಜನಜಾತೀಯ ದಿವಸ್ ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ನಾಗೇಂದ್ರ, ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನಿರ್ದೇಶಕ ಬಿ. ಕಲ್ಲೇಶ್, ಜಿಲ್ಲಾಧಿಕಾರಿ, ಸ್ಥಳಿಯ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಮುಂಗಡವಾಗಿ 6 ಲಕ್ಷ ಹಣ ರಿಲೀಸ್ ಮಾಡಲಾಗಿತ್ತು. ಅಂತಿಮವಾಗಿ 21, 75, 165 ರೂ. ವೆಚ್ಚ ಮಾಡಲಾಗಿದೆ. ಮುಂಗಡ ಕಳೆದು ಬಾಕಿ ಉಳಿದ 15,75,165 ರೂ ಬಿಡುಗಡೆ ಮಾಡಿ ಎಂದು ಚಾಮರಾಜನಗರದ ಜಿಲ್ಲೆ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಅವರು ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಜಯಂತಿಗೆ ಮಾಡಿರುವ ವೆಚ್ಚದ ವಿವರ ಸಮೇತ ಬುಡಕಟ್ಟು ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಖರ್ಚಿನ ವಿವಿಧ ಬಾಬ್ತುಗಳನ್ನು ವಿವರಿಸಲಾಗಿದೆ. ವೇದಿಕೆ ಖರ್ಚು, ಆಹ್ವಾನ ಪತ್ರಿಕೆ, ಕಲಾತಂಡಗಳ ಖರ್ಚು, ಡೆಕೋರೇಷನ್, ರೂಮ್ ಬಾಡಿಗೆ, ಕಾಫಿ ತಿಂಡಿ, ಹೂಗುಚ್ಛ ಹೀಗೆ ಖರ್ಚು ವೆಚ್ಚ 21 ಲಕ್ಷ ತಲುಪಿದೆ.

ಅಚ್ಚರಿ ಎಂದರೆ ವಿವಿಧ ಖರ್ಚುಗಳ ಜೊತೆಗೆ ಇಲಾಖಾ ಸಚಿವರಾದ ಬಿ.ನಾಗೇಂದ್ರ, ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಮತ್ತು ನಿರ್ದೇಶಕರಾದ ಕಲ್ಲೇಶ್ ಅವರು ಹಾಗೂ ಗನ್ ಮ್ಯಾನ್, ಡ್ರೈವರ್ ಮತ್ತು ಪಿಎಗಳಿಗೆ 30 ಸಾವಿರ ರೂ. ನೀಡಿರುವುದಾಗಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಆಯಾ ತಿಂಗಳ ಪ್ರಯಾಣ ಭತ್ಯೆಯನ್ನು ಬಿಲ್ ಪಡೆದು ನಂತರದ ತಿಂಗಳಲ್ಲಿ ಡಿಪಿಎಆರ್ ನಿಂದ ಸಚಿವರು, ಆಪ್ತರಿಗೆ ನೀಡಲಾಗುತ್ತದೆ. ಈ ಜಯಂತಿ ಆಚರಣೆ ವೇಳೆ ನಿಯಮ ಮೀರಿ ಖರ್ಚು ವೆಚ್ಚ ಮಾಡಿರುವುದಲ್ಲದೆ ಸಚಿವರುಗಳಿಗೂ ನಿಯಮ ಬಾಹಿರವಾಗಿ ಈ ಭತ್ಯೆ ನೀಡಲಾಗಿದೆ ಎಂಬ ಆರೋಪ ಕೇಳೀಬಂದಿದೆ.