ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಅಬುಧಾಬಿಗೆ ತೆರಳಿದೆ. ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಇನ್ನೂ 10 ದಿನಗಳ ಅವಕಾಶವಿದೆ. ಇದಕ್ಕೂ ಮುಂಚಿತವಾಗಿ ಅಬುಧಾಬಿಯಲ್ಲಿ ಸಮಯ ಕಳೆಯಲು ಇಂಗ್ಲೆಂಡ್ ತಂಡ ನಿರ್ಧರಿಸಿದೆ.
ಇದಕ್ಕೂ ಮುನ್ನ ಅಬುಧಾಬಿಯಲ್ಲಿ ತರಬೇತಿ ಶಿಬಿರ ಮುಗಿಸಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್‌ಗೂ ಮೂರು ದಿನಗಳ ಮೊದಲು ಭಾರತಕ್ಕೆ ಆಗಮಿಸಿತ್ತು. ಇದೀಗ ಮತ್ತೊಮ್ಮೆ ಅಬುಧಾಬಿಗೆ ತೆರಳಿರುವ ಇಂಗ್ಲೆಂಡ್ ಅಲ್ಲೇ ಕಿರು ಶಿಬಿರ ನಡೆಸಲಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಮೂರನೇ ಟೆಸ್ಟ್ ಪಂದ್ಯಕ್ಕೆ ಎರಡು-ಮೂರು ದಿನಗಳ ಮೊದಲು ಭಾರತಕ್ಕೆ ಹಿಂತಿರುಗುವ ಸಾಧ್ಯತೆಯಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಫೆಬ್ರವರಿ 15 ರಿಂದ ಶುರುವಾಗಲಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೂ ತುಂಬಾ ಮಹತ್ವದ್ದು. ಏಕೆಂದರೆ ಈಗಾಗಲೇ ಸರಣಿ 1-1 ಅಂತರದಿಂದ ಸಮಗೊಂಡಿದ್ದು, ಮುಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಮುನ್ನಡೆ ಸಾಧಿಸಲಿದೆ.
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 28 ರನ್ಗಳಿಂದ ರೋಚಕ ಜಯ ಸಾಧಿಸಿತ್ತು. ಹಾಗೆಯೇ ವಿಶಾಖಪಟ್ಟಣಂನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 106 ರನ್ಗಳ ಅಮೋಘ ಗೆಲುವು ಸಾಧಿಸಿದೆ. ಇದೀಗ ಮೂರನೇ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದೇ ಕುತೂಹಲ.
ಮೂರನೇ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ಹಿರಿಯ ಸ್ಪಿನ್ನರ್ ಜ್ಯಾಕ್ ಲೀಚ್ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಏಕೆಂದರೆ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಲೀಚ್ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.
ಇತ್ತ ತೊಡೆಸಂಧು ನೋವಿನ ಕಾರಣ ದ್ವಿತೀಯ ಟೆಸ್ಟ್ ತಪ್ಪಿಸಿಕೊಂಡಿದ್ದ ಕೆಎಲ್ ರಾಹುಲ್ 3ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಹೀಗಾಗಿ ಮೂರನೇ ಪಂದ್ಯದಲ್ಲೂ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.