Thursday, November 20, 2025
19.9 C
Bengaluru
Google search engine
LIVE
ಮನೆ#Exclusive News26/11 ಮುಂಬೈ ದಾಳಿ ಆರೋಪಿ ಅಬ್ದುಲ್ ರೆಹಮಾನ್ ಹೃದಯಾಘಾತದಿಂದ ಸಾವು

26/11 ಮುಂಬೈ ದಾಳಿ ಆರೋಪಿ ಅಬ್ದುಲ್ ರೆಹಮಾನ್ ಹೃದಯಾಘಾತದಿಂದ ಸಾವು

26/11 ಮುಂಬೈ ದಾಳಿಯ ಆರೋಪಿ ಹಫೀಜ್‌ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಸುದ್ದಿಸಂಸ್ಥೆ ಪಿಟಿಐ ಈ ವಿಚಾರವನ್ನು ಖಚಿತಪಡಿಸಿದೆ. ಅಬ್ದುಲ್ ರೆಹಮಾನ್ ಮಕ್ಕಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಹಫೀಜ್ ಸಯೀದ್‌ನ ಭಾವನಾಗಿದ್ದು, ಜಮಾತ್ ಉದ್ ದಾವಾದ ಉಪ ಮುಖ್ಯಸ್ಥನಾಗಿದ್ದ.

ನಿಷೇಧಕ್ಕೊಳಗಾಗಿರುವ ಈ ಜಮಾತ್ ಉದ್ ದಾವಾ ಸಂಘಟನೆಯೂ, ಅಬ್ದುಲ್ ರೆಹಮಾನ್ ಮಕ್ಕಿ ಕಳೆದ ಕೆಲ ದಿನಗಳಿಂದ ಅಸ್ವಸ್ಥನಾಗಿದ್ದು, ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ಖಚಿತಪಡಿಸಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಿಗೆ ಇಂದು ಮುಂಜಾನೆ ಆಸ್ಪತ್ರೆಯಲ್ಲೇ ಹೃದಯಾಘಾತವಾಗಿದ್ದು, ಆತ ಕೊನೆಯುಸಿರೆಳೆದಿದ್ದಾನೆ ಎಂದು ಜಮಾತ್ ಉದ್ ದಾವಾ ದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ರೆಹಮಾನ್ ಮಕ್ಕಿಗೆ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು 2020 ರಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಅಂದಿನಿಂದಲೂ ಈತ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.  ಇತ್ತ ಆತನ ಸಾವು ಖಚಿತವಾಗುತ್ತಿದ್ದಂತೆ ಪಾಕಿಸ್ತಾನ್ ಮುತಾಹಿದಾ ಮುಸ್ಲಿಂ ಲೀಗ್ (ಪಿಎಂಎಂಎಲ್) ಮಕ್ಕಿ ಪಾಕಿಸ್ತಾನದ ಸಿದ್ಧಾಂತದ ಪ್ರತಿಪಾದಕ ಎಂದು ಹೇಳಿಕೆ ನೀಡಿದೆ.

ಆದರೆ 2023 ರಲ್ಲಿ ವಿಶ್ವಸಂಸ್ಥೆಯು ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಗೊತ್ತುಪಡಿಸಿತು, ಅಲ್ಲದೇ ಆತನ ಆಸ್ತಿ ಮುಟ್ಟುಗೋಲು ಹಾಗೂ ಪ್ರಯಾಣ ನಿಷೇಧ ಹಾಗೂ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಡಿಸಿತು. ದೇಶದ ವಾಣಿಜ್ಯ ನಗರಿ ಮುಂಬೈಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ಈ ಘಟನೆಗೆ ಕಳೆದ ತಿಂಗಳಷ್ಟೇ ಬರೋಬ್ಬರಿ 16 ವರ್ಷ ತುಂಬಿದೆ.  ಲಷ್ಕರ್-ಎ-ತೊಯ್ಬಾ ಭಯೋತ್ಪಾದ ಸಂಘಟನೆಗೆ ಸೇರಿದ ಉಗ್ರರ ಗುಂಪು 2008 ರ ಡಿಸೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈ ನಗರಕ್ಕೆ  ಬಂದು ಈ ದಾಳಿ ನಡೆಸಿದ್ದರು. ಈ ದುರಂತದಲ್ಲಿ ನೂರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಕಳೆದ ಏಪ್ರಿಲ್‌ನಲ್ಲಿ, ಈ ಮುಂಬೈ ದಾಳಿಯ ಮಾಸ್ಟರ್‌ ಮೈಂಡ್ ಹಫೀಜ್ ಸಯೀದ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿದ್ದಾನೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments