ಹ್ಯಾಪಿ ನ್ಯೂ ಇಯರ್-2024..ನೂತನ ವರ್ಷಕ್ಕೆ ನಾವು ಕಾಲಿಟ್ಟಿದ್ದೀವಿ.. ಈ ವರ್ಷ ವಿಶೇಷಗಳಲ್ಲಿ ಪ್ರಮುಖ ಅಂದ್ರೆ ಅದು ಪ್ರಜಾಪ್ರಭುತ್ವದ ಮತ ಕಹಳೆ. ದೇಶದಲ್ಲಿ ಮತದಾರ ಪ್ರಭುವಿನ ಹಬ್ಬ. ಹೌದು ಭಾರತದಲ್ಲಿ ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಜೊತೆಗೆ 8 ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅಷ್ಟೆ ಅಲ್ಲ, ನೆರಯ ಪಾಕಿಸ್ತಾನ, ದೂರದ ಅಮೇರಿಕಾ, ರಷ್ಯ ಬಿಟ್ರನ್ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಪ್ರಜೆಗಳ ಹಬ್ಬ ಅಂತಲೇ ಹೇಳಬಹುದು.
ಜಗತ್ತಿನ ರಾಜಕೀಯ ನಕಾಶೆ ಮೇಲೆ ಈ ಚುನಾವಣೆಗಳು ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತದಲ್ಲಿ ಲೋಕಸಭೆ ಚುನಾವಣೆಯ ಮಹಾ ಪರ್ವ ಈ ವರ್ಷ ನಡೆಯಲಿದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸತತ 3ನೇ ಬಾರಿ ಅಧಿಕಾರದ ಗದ್ದುಗೆ ಮೇಲೆ ದೃಷ್ಟಿ ನೆಟ್ಟಿದ್ದಾರೆ.
ಇದೇ ವೇಳೆ, ಬಿಜೆಪಿಯ ಜಯದ ನಾಗಾಲೋಟಕ್ಕೆ ತಡೆಯೊಡ್ಡಲು ಹಾಗೂ ಮೈತ್ರಿಯನ್ನು ಗಟ್ಟಿಗೊಳಿಸಿಕೊಳ್ಳಲು ಪ್ರತಿಪಕ್ಷಗಳು ಸಮಯದೊಂದಿಗೆ ಸ್ಪರ್ಧೆ ನಡೆಸುತ್ತಿವೆ. ಏನಿದ್ದರೂ ಸದ್ಯದ ಭವಿಷ್ಯದ ಪ್ರಕಾರ ಆಳುವ ಪಕ್ಷದ ಪರವಾಗಿಯೇ ಭವಿಷ್ಯದ ಲೆಕ್ಕಾಚಾರವಿದೆ.
ದೇಶದ 8 ರಾಜ್ಯಗಳಲ್ಲಿ ಚುನಾವಣೆ
ಹೊಸ ವರ್ಷದಲ್ಲಿ ಕನಿಷ್ಠ 8 ರಾಜ್ಯಗಳಲ್ಲಿ ವಿಧಾನಸಭೆಯ ಅವಧಿ ಮುಗಿಯಲಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ, ಜಮ್ಮ ಮತ್ತು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಚುನಾವಣೆ ನಿಗದಿಯಾಗಲಿದೆ.
ದೂರದ ಅಮೇರಿಕಾದಲ್ಲೂ ಎಲೆಕ್ಷನ್

ಅಮೆರಿಕದ ಅಧ್ಯಕ್ಷೀಯ ಚುನಾವಣೆ 2024ರ ನವೆಂಬರ್ನಲ್ಲಿ ನಡೆಯಲಿದೆ. ಇದು ವಿಶ್ವದಲ್ಲಿ ಅತಿ ಹೆಚ್ಚು ಕಾತರದಿಂದ ನಿರೀಕ್ಷಿಸುವ ರಾಜಕೀಯ ಸ್ಪರ್ಧೆಯಾಗಿರಲಿದೆ. ಯಾಕೆಂದರೆ 2020ರಂತೆ ಇದು ಕೂಡ ತುಂಬಾ ಜಿದ್ದಾಜಿದ್ದಿನ ಸ್ಪರ್ಧೆಯಾಗಿರುವ ಎಲ್ಲ ಲಕ್ಷಣಗಳು ಈಗಾಗಲೇ ಕಾಣಿಸಿಕೊಂಡಿವೆ. ಸಮೀಕ್ಷೆ ಪ್ರಕಾರ ಹಾಲಿ ಅಧ್ಯಕ್ಷ ಜೋ ಬಿಡೆನ್ಗಿಂತ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಮುನ್ನಡೆಯಲ್ಲಿದ್ದಾರೆ.
ನೆರೆಯ ಪಾಕಿಸ್ತಾನದಲ್ಲೂ ಮತ ಕಹಳೆ

ನೆರೆಯ ಪಾಕಿಸ್ತಾನದಲ್ಲಿ ಕೂಡ 2024ರಲ್ಲಿ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮಾಜಿ ಪ್ರಧಾನಿಗಳೂ ಕಡು ರಾಜಕೀಯ ವೈರಿಗಳೂ ಆದ ನವಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಇಬ್ಬರೂ ಅಧಿಕಾರಕ್ಕೆ ಮರಳುವ ಹಂಬಲದಲ್ಲಿದ್ದಾರೆ. ಮಾಜಿ ಕ್ರಿಕಟಿಗ ಇಮ್ರಾನ್ ಖಾನ್ ಭ್ರಷ್ಟಾಚಾರ ಆರೋಪದಲ್ಲಿ ಜೈಲಿನಲ್ಲಿದ್ದರೂ ಜನಪ್ರಿಯತೆಯಲ್ಲಿ ಹಿಂದುಳಿದಿಲ್ಲ. ಅವರ ಬೆಂಬಲದ ಕೋಟೆಯನ್ನು ಮುರಿದು ಮುನ್ನಡೆ ಸಾಧಿಸುವ ಗುರಿಯನ್ನು ಷರೀಫ್ ಇಟ್ಟುಕೊಂಡಿದ್ದಾರೆ.
ರಷ್ಯಾದಲ್ಲೂ ನಡೆಯಲಿದೆ ಚುನಾವಣೆ

ರಷ್ಯಾದಲ್ಲೂ 2024 ಮಾರ್ಚ್ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ವ್ಲಾದಿಮಿರ್ ಪುತಿನ್ ಐದನೇ ಸಲ ಅಧ್ಯಕ್ಷ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದಾರೆ. ಸದ್ಯ ಅವರಿಗೆ ಬೆಂಬಲ ಮಟ್ಟ ತುಂಬಾ ಎತ್ತರದಲ್ಲಿದೆ. ಎರಡು ವರ್ಷದಿಂದ ಉಕ್ರೇನ್ ವಿರುದ್ಧ ನಡೆಯುತ್ತಿರುವ ಸುದೀರ್ಘ ಯುದ್ಧದಿಂದ ಪುತಿನ್ ವ್ಯಕ್ತಿತ್ವ ಸ್ವಲ್ಪಮಟ್ಟಿಗೆ ಕುಂದಿದ್ದರೂ ಜನಪ್ರಿಯತೆ ಅಷ್ಟೊಂದು ಕುಸಿದಿಲ್ಲ. ಯುಕ್ರೇನ್, ಇಂಡೋನೇಷ್ಯಾ, ಇರಾನ್, ತೈವಾನ್, ಬ್ರಿಟನ್, ಸೇರಿದಂತೆ ಯೂರೋಪ್ ನ 9 ದೇಶಗಳಲ್ಲಿ ಚುನಾವಣೆ ನಡೆಯಲಿದೆ.
ರಾಜ್ಯದಲ್ಲೂ ಈ ವರ್ಷ ಚುನಾವಣೆ ಪರ್ವ

ಇನ್ನು ಕರ್ನಾಟಕದಲ್ಲಿ ಪಂಚಾಯ್ತಿ ಚುನಾವಣೆಗಳು, ಪಾಲಿಕೆ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ರಾಜ್ಯಸಭಾ ಸದಸ್ಯ ಸ್ಥಾನ, ವಿಧಾನಸಭೆ, ವಿಧಾನಪರಿಷತ್ ಸ್ಥಾನಗಳಿಗೆ ಶಾಸಕರು ಮತದಾನ ಮಾಡಬೇಕಿದೆ. ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯೂ ನಡೆಯಲಿದೆ. ಒಟ್ನಲ್ಲಿ 2024 ಚುನಾವಣೆಯ ಪರ್ವ ಕಾಲ ಅಂತಲೇ ಹೇಳಬಹುದು.