ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರದ ಬಜೆಟ್ ಮೇಲೆ ಕರ್ನಾಟಕದ ಜನರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ರೆ, ಹಾಸನಕ್ಕೆ ಐಐಟಿ ಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮನವಿ ಮಾಡಿದ್ದಾರೆ. ಈ ಎಲ್ಲವುಗಳ ಜೊತೆಗೆ ಇನ್ನಷ್ಟು ಅನುದಾನ, ಯೋಜನೆಗಳು ರಾಜ್ಯಕ್ಕೆ ದೊರಕಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಧಾನಿ ಮೋದಿ ಸರ್ಕಾರದ ಕೊನೆಯ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. ಇದು ಕೇಂದ್ರದ ಮಧ್ಯಂತರ ಬಜೆಟ್ ಆಗಿದ್ದರು ಕರ್ನಾಟಕಕ್ಕೆ ಹಲವು ಯೋಜನೆಗಳು, ಸಾಕಷ್ಟು ಅನುದಾನಗಳನ್ನು ನೀಡುವ ಸಾಧ್ಯತೆ ಇದೆ. ಅಲ್ಲದೇ ಕೆಲವೊಂದು ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಾಗಿದೆ. ಅದು ಕೂಡ ಈ ಬಜೆಟ್‌ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೇಂದ್ರದ ಮಧ್ಯಂತರ ಬಜೆಟ್ ಮೇಲೆ ಬೆಟ್ಟದಷ್ಟು ನೀರಿಕ್ಷೆಗಳನ್ನ ಇಟ್ಟುಕೊಂಡಿರುವ ಕರ್ನಾಟಕದ ಜನರು, ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಸಿಎಂ ಸಿದ್ದರಾಮಯ್ಯನವರು ಮನವಿ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ 6,300 ಕೋಟಿ ರೂಪಾಯಿ ಈ ಬಜೆಟ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ, ರಾಜ್ಯದ ರೈಲ್ವೆ ಯೋಜನೆ ಪೂರ್ಣ ಕಾರ್ಯಕ್ಕೆ ಹಾಗೂ ರಾಜ್ಯದಲ್ಲಿನ ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಮಾಡಲಾಗಿದೆ.
ಪಿಎಂ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ವಿಮೆ ಹಣ ಸಿಗುತ್ತಿಲ್ಲ. ರೈತರಿಗೆ ಬೆಳೆ ನಷ್ಟದ ವೇಳೆ ವಿಮೆ ಹಣ ಸಿಗುವಂತೆ ಯೋಜನೆಯ ಮಾರ್ಪಾಡು ಬಜೆಟ್‌ನಲ್ಲಿ ಆಗಬಹುದು. ರಾಮಾಯಣದ ಸ್ಥಳಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂಲಸೌಕರ್ಯ ಕಲ್ಪಿಸಲು ಒತ್ತು. ತುಮಕೂರು ಕೈಗಾರಿಕಾ ಟೌನ್ ಷಿಪ್ ಅಭಿವೃದ್ಧಿಗೆ ಕ್ರಮ. ಬೆಂಗಳೂರು ಮೆಟ್ರೋ, ಬೆಂಗಳೂರು ಸಬ್ ಆರ್ಬನ್ ರೈಲು ಯೋಜನೆಗೆ ಹೆಚ್ಚಿನ ಹಣ ನೀಡಬೇಕಾಗಿದೆ. ರಾಜ್ಯದ ಹೊಸ ಹೆದ್ದಾರಿ ನಿರ್ಮಾಣ, ಹೆದ್ದಾರಿ ಮೇಲ್ದರ್ಜೆಗೇರಿಸುವ ಯೋಜನೆ ಘೋಷಣೆ ಮಾಡಬಹುದು.
ರಾಜ್ಯದ ನೀರಾವರಿ ಯೋಜನೆಗಳ ಅಭಿವೃದ್ಧಿ, ಹೆಚ್ಚಿನ ಐಐಟಿಗಳು, ಹೊಸ ವಿವಿಗಳ ನಿರ್ಮಾಣ, ದೇಶಿ ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಅನುದಾನ ನೀಡಬಹುದು. ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಜಾರಿ ಮಾಡುತ್ತಾರೆಂದು ಕಾದು ನೋಡಬೇಕಿದೆ. ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಕ್ಕೆ ಕೇಂದ್ರ ಆದ್ಯತೆ ನೀಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಇವೆಲ್ಲ ನೆರವೇರಬೇಕು ಎಂದರೆ ಇಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಕೃಪೆ ತೋರಬೇಕಾಗಿದೆ.