ಮುಂಬೈ: ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಶಿವಸೇನಾ ಶಾಸಕ ಸಂಜಯ್ ಗಾಯಕ್‌ವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೀಸಲಾತಿ ವ್ಯವಸ್ಥೆಯನ್ನು ತೆಗೆದು ಹಾಕುವ ಬಗ್ಗೆ ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಅವರ ನಾಲಿಗೆ ಕತ್ತರಿಸುವಂತೆ ಸಿಎಂ ಏಕನಾಥ್ ಶಿಂಧೆ ಬಣದ ಶಾಸಕ ಹೇಳಿರುವುದು ಆಕ್ರೋಶಕ್ಕೆ ಗುರಿಯಾಗಿದೆ.ವಿದೇಶದಲ್ಲಿ ಇದ್ದಾಗ, ಭಾರತದಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ತಾವು ರದ್ದುಗೊಳಿಸಲು ಬಯಸಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಕಾಂಗ್ರೆಸ್‌ನ ಆಂತರಿಕ ವಿಚಾರವನ್ನು ಬಹಿರಂಗಗೋಳಿಸಿದ್ದಾರೆ ಎಂದು ಸುದ್ದಿಗಾರರ ಜತೆ ಮಾತನಾಡುವ ವೇಳೆ ಸಂಜಯ್ ಗಾಯಕ್‌ವಾಡ್ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮೀಸಲಾತಿಯನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡಿದ್ದರು. ಇದು ಮೀಸಲಾತಿಯನ್ನು ವಿರೋಧಿಸುವ ಅವರ ಒಳ ಮನಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ ನಾನು 11 ಲಕ್ಷ ರೂ ಬಹುಮಾನ ನೀಡುತ್ತೇನೆ ಎಂದು ಗಾಯಕ್‌ವಾಡ್ ಘೋಷಿಸಿದ್ದಾರೆ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿದ್ದು ಇದೇ ಕಾಂಗ್ರೆಸ್ ಎಂದು ಅವರು ಕಿಡಿ ಕಾರಿದರು. ಮರಾಠರು, ಧಾಂಗರ್‌ಗಳು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿವೆ. ಆದರೆ ಅದಕ್ಕೂ ಮುನ್ನವೇ ಮೀಸಲಾತಿ ಲಾಭವನ್ನು ಮುಗಿಸುವ ಬಗ್ಗೆ ಗಾಂಧಿ ಮಾತನಾಡುತ್ತಿದ್ದಾರೆ ಆಕ್ರೊಶ ವ್ಯಕ್ತಪಡಿಸಿದರು.