ಬೆಂಗಳೂರು: ರಾಜ್ಯ ಸರ್ಕಾರದ ಗೆಜೆಟ್‌ನಲ್ಲಿ ತಪ್ಪಾಗಿ ನಮೂದಾಗಿರುವ ಕಾರಣದಿಂದಾಗಿ ವಿಜಯಪುರ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ರೈತರ ಭೂಮಿ ವಕ್ಫ್ಗೆ ಸೇರಿದ್ದು ಎಂಬ ಗೊಂದಲ ಸೃಷ್ಟಿಯಾಗಿದೆ. ರೈತರ ಒಂದಿಂಚು ಭೂಮಿಯನ್ನೂ ವಕ್ಫ್ಗೆ ಬಿಟ್ಟುಕೊಡುವುದಿಲ್ಲ ಎಂದು ಕೈಗಾರಿಕಾ ಸಚಿವ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ರೈತರಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿರುವ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್ ಆಸ್ತಿ ಇರುವುದು ವಿಜಯಪುರ ನಗರದ ವ್ಯಾಪ್ತಿಯಲ್ಲಿರುವ ಮಹಾಲಬಾಗಾಯತದಲ್ಲಿ ಆದರೆ, 1974ರ ಗೆಜೆಟ್‌ನಲ್ಲಿ ಮಹಾಲಬಾಗಾಯತದ ಪಕ್ಕದಲ್ಲಿ ಹೊನವಾಡ ಎಂದು ಬರೆಯಲಾಗಿದೆ. ಅದರಂತೆ ಹೊನವಾಡ ಗ್ರಾಮದಲ್ಲಿ ಕೇವಲ ಜಿಲ್ಲೆಯ 11 ಎಕರೆ ಮಾತ್ರ ವಕ್ಫ್ಗೆ ಸೇರಿದ್ದಾಗಿದ್ದು, ಅದರಲ್ಲಿ 10.14 ಎಕರೆ ಖಬರಸ್ತಾನವಿದ್ದು, ಉಳಿದ 24 ಗುಂಟೆ ಈದ್ಯಾ, ಮಸೀದಿ ಸೇರಿದಂತೆ ಇನ್ನಿತರ ಕಟ್ಟಡಗಳಿವೆ. ಉಳಿದ ಭೂಮಿ ರೈತರಿಗೆ ಸೇರಿದ್ದಾಗಿದೆ ಎಂದರು. 1974ರ ಗೆಜೆಟ್‌ನಲ್ಲಿನ ಗೊಂದಲದಿಂದ 1,200 ಎಕರೆ ಭೂಮಿ ವಕ್ಫ್ಗೆ ಸೇರಿದೆ ಎಂಬ ಗೊಂದಲ ಸೃಷ್ಟಿಯಾಗಿದೆ. ಅಲ್ಲದೆ, 1974ರ ತಪ್ಪುಗಳನ್ನು 1977ರಲ್ಲಿ ವಕ್ಫ್ಗೆ ಮಂಡಳಿಯೇ ಸರಿಪಡಿಸಿ ಹೊನವಾಡ ಹೆಸರನ್ನು ತೆಗೆದು ಹಾಕಿದೆ ಎಂದು ಹೇಳಿದರು. ರೈತರು, ಖಾಸಗಿ ಭೂ ಮಾಲೀಕರು ಈ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಹೇಳಿದ ಸಚಿವರು, ಗೊಂದಲದ ಕುರಿತಂತೆ ಅಧಿಕಾರಿಗಳೊಂದಿಗೆ ಮತ್ತೆ ಸಭೆ ನಡೆಸಿ ಅದನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಈ ವಿಚಾರದಲ್ಲಿ ಈಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಯತ್ನಾಳ್ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಹೊನವಾಡ ರೈತರ ಭೂಮಿ ವಕ್ಫ್ಗೆ ಸೇರಿಲ್ಲ: ಸಚಿವ ಎಂ.ಬಿ.ಪಾಟೀಲ್
RELATED ARTICLES