ಹುಬ್ಬಳ್ಳಿ:ಬೊಲೆರೋ ಹಾಗೂ ಕ್ಯಾಂಟರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಕ್ಯಾಂಟರ್ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೊಲೆರೋ ವಾಹನದ ಚಾಲಕನ ಕಾಲುಗಳ ಕಟ್ ಆದ ಘಟನೆ ಹುಬ್ಬಳ್ಳಿ ಹೊರವಯಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡ ರಾತ್ರಿ ನಡೆದಿದೆ. ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ತಾರಿಹಾಳ ಸೇತುವೆ ಬಳಿಯಲ್ಲಿ ಈ ದುರ್ಘಟನೆ ನಡೆದಿದೆ. ಬೆಳಗಾವಿ ಕಡೆಯಿಂದ ಹಾವೇರಿ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ವಾಹನಕ್ಕೆ, ಹುಬ್ಬಳ್ಳಿಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ವಾಹನ ಚಾಲನೆ ಮಾಡುತ್ತಿದ್ದ ರಾಣೇಬೆನ್ನೂರು ಮೂಲದ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಸಂಚಾರಿ ವಿಭಾಗದ ಡಿಸಿಪಿ ರವೀಶ್ ಹಾಗೂ ದಕ್ಷಿಣ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಮರಳುಸಿದ್ಧಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ಮೃತದೇಹ ಹೊರತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದರು. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.