ನವದೆಹಲಿ: ತಿರುಪತಿ ತಿರುಮಲ ಶ್ರೀಬಾಲಾಜಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಜೊತೆಗೆ ಇತರೆ ಕಳಪೆ ಪದಾರ್ಥಗಳನ್ನು ಸೇರಿಸಲಾಗಿದೆ ಎಂಬ ಪ್ರಕರಣ ಹೈಕೋರ್ಟ್-ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ತಮ್ಮ ಅಧಿಕಾರಾವಧಿಯಲ್ಲಿ ಲಡ್ಡು ಪ್ರಸಾದದಲ್ಲಿ ಯಾವುದೇ ಕಲಬೆರಕೆ ಮಾಡಲಾಗಿಲ್ಲ ಎಂದು ಸಮಜಾಯಿಷಿ ನೀಡಿರುವ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್‌ವೋಹನ್ ರೆಡ್ಡಿ, ಈ ವಿಚಾರವಾಗಿ ಪ್ರಧಾನಮಂತ್ರಿ ಹಾಗೂ ಸಿಜೆಐಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.ಹಾಲಿ ಸಿಎಂ ಚಂದ್ರಬಾಬು ನಾಯ್ಡು ಅವರು ದೇವರ ಹೆಸರಿನಲ್ಲಿ ಅನುಕಂಪದ ರಾಜಕಾರಣ ಮಾಡುತ್ತಿದ್ದಾರೆ.
ಟಿಟಿಡಿ ಟ್ರಸ್ಟ್ ಕೂಡ ತುಪ್ಪದ ಗುಣಮಟ್ಟ ಪರೀಕ್ಷೆಗಳನ್ನು ನಡೆಸುತ್ತದೆ, ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಈ ವಿಷಯದಲ್ಲಿ ವಾಸ್ತವಗಳನ್ನು ಹೇಗೆ ತಿರುಚಲಾಗಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆಯುವುದಾಗಿ ಜಗನ್ ತಿಳಿಸಿದ್ದಾರೆ ಈ ರೀತಿ ಆರೋಪಗಳನ್ನು ಮಾಡಿದ ನಾಯ್ಡು, ಭಗವಾನ್ ವೆಂಕಟೇಶ್ವರನಿಗೆ ಅವಮಾನ ಮಾಡಿದ್ದಾರೆ. ತಮ್ಮ 100 ದಿನಗಳ ಅಧಿಕಾರಾವಧಿಯಲ್ಲಿ ಏನೂ ಮಾಡಿಲ್ಲ ಎಂಬ ಸತ್ಯ ಮರೆಮಾಚಲು ಈ ವಿವಾದ ಹುಟ್ಟುಹಾಕಿದ್ದಾರೆ ಎಂದು ಜಗನ್ ಕಿಡಿಕಾರಿದ್ದಾರೆ.
ಏತನ್ಮಧ್ಯೆ, ವೈಎಸ್‌ಆರ್‌ಸಿಪಿ ಪಕ್ಷದ ಹಿರಿಯ ನಾಯಕ ವೈ.ವಿ. ಸುಬ್ಬಾ ರೆಡ್ಡಿ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಲಡ್ಡು ಪ್ರಸಾದ ವಿವಾದ ಸಂಬಂಧ ಅರ್ಜಿ ಸಲ್ಲಿಸಿದ್ದು, ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸತ್ಯ ಬೆಳಕಿಗೆ ತರಬೇಕು ಎಂದು ಕೋರ್ಟ್‌ಗೆ ಕೋರಿದ್ದಾರೆ. ಹೈಕೋರ್ಟ್ ಸೆ.25ರಂದು ಅರ್ಜಿ ವಿಚಾರಣೆ ನಡೆಸಲಿದೆ. ಅದೇ ರೀತಿ, ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿರುವ ಅಂಶ ಹಿಂದು ಧಾರ್ಮಿಕ ಪದ್ಧತಿ ಉಲ್ಲಂಘಿಸಿದ್ದು. ಅಸಂಖ್ಯಾತ ಭಕ್ತರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಸಂಬಂಧ ಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.