ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ತನಿಖೆಗೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಇಂದು ವಜಾಗೊಳಿಸಿದೆ.
ಮುಖ್ಯಮಂತ್ರಿ ವಿರುದ್ಧವೇ ಎದುರಾದ ಆರೋಪ ಮತ್ತು ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರು ಅನುಮತಿ ನೀಡಿದ ವಿಷಯ ರಾಜ್ಯ ರಾಜಕೀಯದಲ್ಲಿ ಕಂಪನ ಹಾಗೂ ಕೋಲಾಹಲ ಸೃಷ್ಟಿಸಿತ್ತು. ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ, ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ್ದರು. ‘ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದ್ದ ಸಚಿವ ಸಂಪುಟ ಸಭೆ, ಅವರಿಗೆ ಧಿಕ್ಕಾರ ಹೇಳುವ ತೀರ್ಮಾನವನ್ನು ಕೈಗೊಂಡಿತ್ತು. ‘ಅನುಮತಿ ವಾಪಸ್ ಪಡೆಯಬೇಕು’ ಎಂದೂ ಸಂಪುಟ ಸಭೆ ಒತ್ತಾಯಿಸಿತ್ತು. ಸಿದ್ದರಾಮಯ್ಯ ಸಲ್ಲಿಸಿದ್ದ ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ದಿಗ್ಗಜ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ತೀರ್ಪನ್ನು ಇದೇ 12ರಂದು ಕಾಯ್ದಿರಿಸಿತ್ತು. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಪ್ರಕರಣದ ದೂರುದಾರರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಎಸ್.ಪಿ.ಪ್ರದೀಪ್ ಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಅರ್ಜಿದಾರ ಸಿದ್ದರಾಮಯ್ಯ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರವಿವರ್ಮ ಕುಮಾರ್ ಮತ್ತು ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಟಿ.ಜೆ.ಅಬ್ರಹಾಂ ಪರ ರಂಗನಾಥ ರೆಡ್ಡಿ, ಸ್ನೇಹಮಯಿ ಕೃಷ್ಣ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಮಣಿಂದರ್ ಸಿಂಗ್, ಕೆ.ಜಿ.ರಾಘವನ್, ಲಕ್ಷ್ಮಿ ಅಯ್ಯಂಗಾರ್, ಎಸ್.ಪಿ.ಪ್ರದೀಪ್ ಕುಮಾರ್ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿವಾದ ಮಂಡಿಸಿದ್ದರು. ಸಿದ್ದರಾಮಯ್ಯ ಪರ ವಕೀಲ ಶತಭಿಷ ಶಿವಣ್ಣ ಹಾಗೂ ರಾಜ್ಯಪಾಲರ ಕಾರ್ಯದರ್ಶಿ ಪರ ಹೈಕೋರ್ಟ್ ವಕೀಲರಾದ ಕೆ.ಅಭಿಷೇಕ್ ವಕಾಲತ್ತು ವಹಿಸಿದ್ದರು.