ಮೈಸೂರು ; ಸರಿಯಾದ ನಿರ್ವಹಣೆ ಇಲ್ಲದೇ ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಗಿತವಾಗಿದೆ. ನಗರದ ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಸ್ಥಗಿತವಾಗಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಸರ್ಕಾರದ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ಗೆ ಎಳ್ಳುನೀರು ಬಿಡಲಾಗಿದೆ.
ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಪ್ರತಿನಿಧಿಸುವ ಕ್ಷೇತ್ರದಲ್ಲೆ ಜನರ ಹೊಟ್ಟೆ ತುಂಬಿಸಬೇಕಿದ್ದ ಇಂದಿರಾ ಕ್ಯಾಂಟೀನ್ಗೆ ಬೀಗ ಹಾಕಿ ಬಂದ್ ಮಾಡಲಾಗಿದೆ. ಲಕ್ಷಾಂತರ ರೂ. ವೆಚ್ಚದ ಕ್ಯಾಂಟೀನ್ ಸೊರಗಿದ್ದು, ಮುರಿದ ಕಿಟಕಿ, ಬಾಗಿಲುಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು, ಜನಪ್ರತಿನಿಧಿಗಳ ಲೋಪ, ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಊಟ ತಿಂಡಿ ಕೊಡುತ್ತಿದ್ದೇವೆ ಅಂತ ಲೆಡ್ಜರ್ ಪುಸ್ತಕದಲ್ಲಿ ನಮೂದು ಮಾಡಲಾಗಿದೆ. ಆ ಮೂಲಕ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಸರ್ಕಾರ ಹಣ ಲೂಟಿ ಮಾಡುತ್ತಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಪ್ರತಿದಿನ ಲೆಡ್ಜರ್ ಪುಸ್ತಕದಲ್ಲಿ ಊಟದ ವಿವರ ನಮೂದು ಮಾಡಲಾಗುತ್ತಿದೆ. ಇಂದಿನ ದಿನಾಂಕದಲ್ಲೂ ಊಟದ ವಿವರ ನಮೂದಿಸಲಾಗಿದೆ. 150 ಇಡ್ಲಿ, 10 kg ಬಾತು, 5 ಕೆ.ಜಿ. ಚಟ್ನಿ ಕೊಡಲಾಗಿದೆ ಎಂದು ಎಂಟ್ರಿಯಾಗಿದೆ. ಲೆಡ್ಜರ್ ಪುಸ್ತಕವನ್ನ ಗುತ್ತಿಗೆದಾರರು ಕ್ಯಾಂಟೀನ್ನಲ್ಲೆ ಬಿಟ್ಟುಹೋಗಿದ್ದಾರೆ.