
ಗದಗ: ಐತಿಹಾಸಿಕ ದೇಗುಲಗಳ ನಾಡು ಎಂದೇ ಪ್ರಸಿದ್ಧಿಯಾದ ಲಕ್ಕುಂಡಿಯಲ್ಲಿ ಎರಡನೇ ದಿನದ ಉತ್ಖನನ ಕಾರ್ಯ ಭರದಿಂದ ಸಾಗಿದ್ದು, ಈ ವೇಳೆ ಮಹತ್ವದ ಪುರಾತನ ವಸ್ತುವೊಂದು ಪತ್ತೆಯಾಗಿದೆ. ಈ ಬೆಳವಣಿಗೆಯಿಂದಾಗಿ ಇಡೀ ಗ್ರಾಮದಲ್ಲಿ ನಿಧಿಯ ಕುರಿತಾದ ಚರ್ಚೆಗಳು ಮತ್ತು ಕುತೂಹಲ ಮುಗಿಲು ಮುಟ್ಟಿವೆ.
ಎರಡನೇ ದಿನವೇ ಸಿಕ್ಕಿತು ಪುರಾತನ ವಸ್ತು: ಭಾರತೀಯ ಪುರಾತತ್ವ ಇಲಾಖೆ (ASI) ಲಕ್ಕುಂಡಿಯ ಕೋಟೆ ವೀರಭದ್ರ ದೇಗುಲದ ಆವರಣದಲ್ಲಿ ನಡೆಸುತ್ತಿರುವ ಉತ್ಖನನದ ವೇಳೆ ಪುರಾತನ ಕಾಲದ ಬಳಕೆಯ ವಸ್ತುವೊಂದು ಪತ್ತೆಯಾಗಿದೆ ಎನ್ನಲಾಗಿದೆ. ಈ ವಸ್ತು ಸಿಗುತ್ತಿದ್ದಂತೆ ಸ್ಥಳದಲ್ಲಿದ್ದ ಅಧಿಕಾರಿಗಳು ತೀವ್ರ ಜಾಗರೂಕತೆ ವಹಿಸಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಮಣ್ಣಿನ ಆಳಕ್ಕೆ ಹೋದಂತೆಲ್ಲಾ ಮತ್ತಷ್ಟು ಐತಿಹಾಸಿಕ ಕುರುಹುಗಳು ಸಿಗುವ ಸಾಧ್ಯತೆ ದಟ್ಟವಾಗಿದೆ.
ಲಕ್ಕುಂಡಿಯಲ್ಲಿ ನಿಧಿ ಇದೆಯೇ? ಲಕ್ಕುಂಡಿಯ ನೂರಾರು ಸ್ಥಳಗಳಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆಯ ಕಾಲದ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಅಪಾರ ಚಿನ್ನಾಭರಣ ಮತ್ತು ನಿಧಿ ಇದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈಗ ಕೋಟೆ ವೀರಭದ್ರ ದೇಗುಲದ ಆವರಣದಲ್ಲಿ ಉತ್ಖನನ ನಡೆಯುತ್ತಿರುವುದರಿಂದ, “ನಿಧಿ ಸಿಗುತ್ತದೆಯೇ?” ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಗ್ರಾಮ ಸ್ಥಳಾಂತರದ ಭೀತಿ ಮತ್ತು ಕುತೂಹಲ: ಒಂದು ವೇಳೆ ದೇಗುಲದ ಆವರಣದಲ್ಲಿ ದೊಡ್ಡ ಮಟ್ಟದ ನಿಧಿ ಅಥವಾ ಐತಿಹಾಸಿಕ ಸ್ಮಾರಕಗಳ ಅವಶೇಷಗಳು ಪತ್ತೆಯಾದರೆ, ಇಡೀ ಗ್ರಾಮವನ್ನೇ ಅಗೆಯಲಾಗುತ್ತದೆಯೇ? ಎಂಬ ಆತಂಕವೂ ಶುರುವಾಗಿದೆ. ಲಕ್ಕುಂಡಿಯನ್ನು ‘ಹಂಪಿ’ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಈ ಹಿಂದೆಯೇ ಯೋಚಿಸಿತ್ತು. ಈಗ ಉತ್ಖನನದಲ್ಲಿ ಮಹತ್ವದ ವಸ್ತುಗಳು ಸಿಕ್ಕರೆ, ಲಕ್ಕುಂಡಿ ಗ್ರಾಮವನ್ನೇ ಸ್ಥಳಾಂತರ ಮಾಡಿ ಸಂಪೂರ್ಣ ಉತ್ಖನನ ಮಾಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅಧಿಕಾರಿಗಳ ನಡೆ ಏನು? ಸದ್ಯಕ್ಕೆ ಪತ್ತೆಯಾಗಿರುವ ವಸ್ತುವಿನ ಪ್ರಾಮುಖ್ಯತೆಯನ್ನು ಪುರಾತತ್ವ ತಜ್ಞರು ಪರಿಶೀಲಿಸುತ್ತಿದ್ದಾರೆ. ಇದು ಕೇವಲ ಐತಿಹಾಸಿಕ ಕುರುಹೋ ಅಥವಾ ನಿಧಿಯ ಮುನ್ಸೂಚನೆಯೋ ಎಂಬುದು ಸದ್ಯದಲ್ಲೇ ತಿಳಿಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.


