
ಬೆಳಗಾವಿ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ, ಈಗ ಕುಂದಾನಗರಿ ಬೆಳಗಾವಿಯಲ್ಲೂ ಬಂಗಾರದ ನಿಧಿ ಪತ್ತೆಯಾಗಿರುವ ವದಂತಿ ಭಾರೀ ಸಂಚಲನ ಮೂಡಿಸಿದೆ. ರಾಯಬಾಗ ತಾಲೂಕಿನ ಪಾಲಭಾವಿ ಗ್ರಾಮದ ಜಮೀನೊಂದರಲ್ಲಿ ಬರೋಬ್ಬರಿ 3 ಕೆಜಿಗೂ ಹೆಚ್ಚು ಬಂಗಾರ ಸಿಕ್ಕಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸರು ಅಲರ್ಟ್ ಆಗಿದ್ದಾರೆ.
ಗ್ರಾಮದ ರೈತ ಪ್ರಕಾಶ್ ನಿಂಗನೂರು ಎಂಬುವವರಿಗೆ ಸೇರಿದ ತೋಟದ ಜಮೀನಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಜಮೀನಿನಲ್ಲಿ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಹೂತು ಹಾಕಿದ್ದ ನಿಧಿ ಪತ್ತೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಣ್ಣು ಸರಿಸುವಾಗ ನಿಧಿ ಸಿಕ್ಕಿರುವುದನ್ನು ಪ್ರಕಾಶ್ ಅವರ ಅಣ್ಣನ ಮಗ ಕಂಡಿದ್ದಾನೆ ಎನ್ನಲಾಗಿದ್ದು, ಈ ವಿಚಾರ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.
ನಿಧಿ ಸಿಕ್ಕ ವಿಚಾರ ತಿಳಿಯುತ್ತಿದ್ದಂತೆಯೇ ಜಮೀನಿನ ಮಾಲೀಕನಿಗೆ ಯಾಮಾರಿಸಿ, ಪಕ್ಕದ ಜಮೀನಿನವರು ರಾತ್ರೋರಾತ್ರಿ ನಿಧಿಯನ್ನು ಹೊತ್ತೊಯ್ದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆನಂದ ನಿಂಗನೂರು ಎಂಬುವವರು ಈ ನಿಧಿಯನ್ನು ಕದ್ದು ಸಾಗಿಸಿದ್ದಾರೆ ಎಂದು ಪ್ರಕಾಶ್ ನಿಂಗನೂರು ಅವರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಈಗ ನಿಧಿಯದ್ದೇ ಚರ್ಚೆಯಾಗುತ್ತಿದೆ.
3 ಕೆಜಿ ಬಂಗಾರ ಪತ್ತೆಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ರಾಯಬಾಗ ತಾಲ್ಲೂಕು ಆಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದ್ದು, ನಿಜವಾಗಿಯೂ ಅಲ್ಲಿ ನಿಧಿ ಇತ್ತೇ? ಅಥವಾ ಇದು ಕೇವಲ ವದಂತಿಯೇ? ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.


